ನಾಲ್ಕನೇ ಕ್ರಮಾಂಕದಲ್ಲಿ ಯಾರು ಪ್ರಶ್ನೆ ಮಾಡುವಂತಿಲ್ಲ.. ಟೀಮ್ ಇಂಡಿಯಾಗೆ ಆಧಾರಸ್ತಂಭವಾಗಿರುವ ಅಯ್ಯರ್
ಟೀಮ್ ಇಂಡಿಯಾ.., ವಿಶ್ವ ಕ್ರಿಕೆಟ್ ನ ಬಲಿಷ್ಠ ತಂಡ. ಬೌಲಿಂಗ್ ಆಗಿರಲಿ, ಬ್ಯಾಟಿಂಗ್ ಆಗಿರಲಿ, ಫೀಲ್ಡಿಂಗ್ ಆಗಿರಲಿ.. ಯಾವುದರಲ್ಲೂ ಕಮ್ಮಿ ಏನು ಇಲ್ಲ. ಹೆಚ್ಚಾಗಿ ಬ್ಯಾಟಿಂಗ್ ಅನ್ನೇ ನೆಚ್ಚಿಕೊಂಡಿದ್ದ ಟೀಮ್ ಇಂಡಿಯಾ ಕಳೆದ ಕೆಲವು ವರ್ಷಗಳಿಂದ ವಿಶ್ವ ಶ್ರೇಷ್ಠ ವೇಗದ ಬೌಲಿಂಗ್ ಪಡೆಯನ್ನು ಹೊಂದಿದೆ. ಆದ್ರೆ ಕಳೆದ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾವನ್ನು ಕಾಡಿದ್ದು ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮೆನ್.
ವಿಶ್ವಕಪ್ ನಂತಹ ಪ್ರತಿಷ್ಠಿತ ಟೂರ್ನಿಯನ್ನು ಆಡುವಾಗಲೂ ಕೂಡ ಟೀಮ್ ಇಂಡಿಯಾದಲ್ಲಿ ನಂಬಿಕೆಯ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮೆನ್ ಇರಲಿಲ್ಲ. ಅಂಬಟಿ ರಾಯುಡು ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ರೂ ಕೂಡ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಬದಲಾಗಿ ಆಲ್ರೌಂಡರ್ ವಿಜಯ್ ಶಂಕರ್ಗೆ
ಅದೃಷ್ಟ ಒಲಿದು ಬಂತು. ಆ ನಂತರ ರಿಷಬ್ ಪಂತ್ಗೆ ಆ ಸ್ಥಾನ ಬಯಸದೇ ಬಂದ ಭಾಗ್ಯ ಎಂಬಂತಾಗಿತ್ತು. ಆದ್ರೆ ರಿಷಬ್ ಪಂತ್ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸಿದ್ರು. ಅದೂ ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ನಲ್ಲಿ ಟೀಮ್ ಇಂಡಿಯಾ ಸೋಲಲು ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯವೇ ಅಂತ ಕ್ರಿಕೆಟ್ ಪಂಡಿತರು ವಿಶ್ಲೇಷಣೆ ಮಾಡಿದ್ದಾರೆ.
ಆದ್ರೆ ಈಗ ಟೀಮ್ ಇಂಡಿಯಾಗೆ ನಾಲ್ಕನೇ ಕ್ರಮಾಂಕದ ಚಿಂತೆ ಇಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಹಾಗೂ ಮುಂಬೈ ಆಟಗಾರ ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾಗೆ ಆಧಾರಸ್ತಂಭವಾಗಿದ್ದಾರೆ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಶ್ರೇಯಸ್ ಅಯ್ಯರ್ ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ. ಭಾರತ ಎ ತಂಡದ ನಾಯಕನಾಗಿದ್ದ ಅಯ್ಯರ್ ಟೀಮ್ ಇಂಡಿಯಾದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಶ್ರೇಯಸ್ ಅಯ್ಯರ್ ಹೇಳಿದ್ದು ಇಷ್ಟು… ಇನ್ನು ಮುಂದೆ ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕದ ಬಗ್ಗೆ ಯಾವುದೇ ಪ್ರಶ್ನೆಗಳು ಮೂಡಿ ಬರುವುದಿಲ್ಲ ಎಂದು ಅಂದಿದ್ದಾರೆ. ಯಾಕಂದ್ರೆ ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕವನ್ನು ಸುಭದ್ರ ಮಾಡಿಕೊಂಡಿದ್ದೇನೆ ಎಂಬ ವಿಶ್ವಾಸದಲ್ಲೇ ಹೇಳಿದ್ದಾರೆ.
ಈಗಾಗಲೇ ನಾನು ಸಾಕಷ್ಟು ಸಂದರ್ಶನಗಳಲ್ಲಿ ಇದೇ ಮಾತನ್ನು ಹೇಳಿದ್ದೇನೆ. ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂದಲ್ಲಿ ಯಾವುದೇ ಪ್ರಶ್ನೆಗಳು ಬರಬಾರದು ಅಂತ. ಆ ಕ್ರಮಾಂಕದಲ್ಲಿ ಯಾರೇ ಒಬ್ಬರು ವರ್ಷದಿಂದ ಆಡ್ತಾ ಇದ್ದಾರೆ ಅಂದ್ರೆ ಅವರು ಆ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ ಅಂತ ಅರ್ಥ. ನಾನು ನಾಲ್ಕನೇ ಕ್ರಮಾಂಕವನ್ನು ಭದ್ರವಾಗಿಟ್ಟುಕೊಂಡಿರುವ ಬಗ್ಗೆ ಹೆಮ್ಮೆ ಇದೆ. ಆದ್ರೆ ಅದೇ ಸ್ಥಾನಕ್ಕೆ ಸೀಮಿತವಾಗಿರಬಾರದು. ಪರಿಸ್ಥಿತಿಗೆ ಅನುಗುಣವಾಗಿ ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಲು ಸಿದ್ಧನಿರಬೇಕು ಎಂದು ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
25ರ ಹರೆಯದ ಶ್ರೇಯಸ್ ಅಯ್ಯರ್ ಅವರು 18 ಪಂದ್ಯಗಳಲ್ಲಿ 50ರ ಸರಾಸರಿಯನ್ನು ಹೊಂದಿದ್ದಾರೆ. 16 ಏಕದಿನ
ಪಂದ್ಯಗಳನ್ನು ಆಡಿರುವ ಶ್ರೇಯಸ್ ಅಯ್ಯರ್, 9 ಬಾರಿ ಅರ್ಧಶತಕ ದಾಖಲಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಶತಕ ಕೂಡ ಸಿಡಿಸಿದ್ದಾರೆ.
ನಾನು ಶತಕ ದಾಖಲಿಸುವುದಕ್ಕಿಂತ ಮುನ್ನ ದಿನ ಅಲ್ಲಿನ ಗೋಡೆಯ ಶತಕ ಸಿಡಿಸಿದವರ ಹೆಸರುಗಳಿದ್ದವು. ಅದರಲ್ಲಿ ಶಿಖರ್ ಧವನ್ ಹೆಸರು ಕೂಡ ಇತ್ತು. ಅದನ್ನು ನೋಡಿದಾಗ ನನ್ನ ಹೆಸರು ಅಲ್ಲಿ ಇರಬೇಕು ಅಂತ ಮನದಲ್ಲೇ ಅಂದುಕೊಂಡಿದ್ದೆ. ಮರುದಿನದ ಪಂದ್ಯದಲ್ಲಿ ನಾನು ಶತಕ ದಾಖಲಿಸಿದ್ದೆ ಎಂದು ತನ್ನ ಅವಿಸ್ಮರಣೀಯ ಶತಕದ ಬಗ್ಗೆ ನೆನಪು ಮಾಡಿಕೊಂಡ್ರು ಅಯ್ಯರ್








