ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಾಳೆ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಸ ನೆರವೇರಿಸಲಿದ್ದಾರೆ. ಈ ಮೂಲಕ ಕೋಟ್ಯಾಂಟರ ಹಿಂದೂಗಳ ಕನಸು ನನಸಾಗಲಿದೆ. ಇದರ ಬೆನ್ನಲ್ಲೇ ರಾಜ್ಯದ ರಾಮ ಭಕ್ತರಿಗಾಗಿ ರಾಮಮಂದಿರದ ಆವರಣದಲ್ಲಿ ಕರ್ನಾಟಕ ಯಾತ್ರಿ ಭವನ ನಿರ್ಮಾಣಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ ಬಳಿ ಮನವಿ ಮಾಡಿಕೊಳ್ಳುವಂತೆ , ಮುಜುರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ರಾಮ ಮಂದಿರ ನಿರ್ಮಾಣದ ವೇಳೆಗೆ ಸುಸಜ್ಜಿತ ಕರ್ನಾಟಕ ಯಾತ್ರಿ ಭವನ ನಿರ್ಮಾಣವಾಗಬೇಕೆಂಬುದು ಪೇಜಾವರ ಶ್ರೀಗಳ ಕನಸಾಗಿತ್ತು. ಅಯೋಧ್ಯೆಯು ತಿರುಪತಿಯ ಮಾದರಿಯಲ್ಲಿ ಹಿಂದೂಗಳಿಗೆ ಪವಿತ್ರ ಕ್ಷೇತ್ರವಾಗಲಿದೆ. ಅಲ್ಲಿಗೆ ಹೋಗುವ ಕರ್ನಾಟಕದ ಆಸ್ತಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ, ಅಲ್ಲಿ ಕರ್ನಾಟಕದ ಯಾತ್ರಿಕರಿಗಾಗಿ ಯಾತ್ರಿ ನಿವಾಸದ ಅಗತ್ಯ ವಿದೆ. ಹೀಗಾಗಿ ಈ ಸಂಬಂಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಅವರ ಮುಂದೆ ಬೇಡಿಕೆ ಇರಿಸುವಂತೆ ಸಚಿವ ಕೋಟ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.








