ಸರ್ಕಾರ ಫೈಲ್ಯೂರ್ ಆಗಿದೆ ಕೆಲಸ ನಿಭಾಯಿಸಿಲ್ಲ ಎಂಬ ಹೇಳಿಕೆಗಳು ಪೊಲಿಟಿಕಲ್ ಸ್ಟಂಟ್ – ಡಿಕೆಶಿಗೆ ಶ್ರೀರಾಮುಲು ಟಾಂಗ್
ಸರ್ಕಾರ ICUನಲ್ಲಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಶ್ರೀರಾಮುಲು ಅವರು ಚಿತ್ರದುರ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅಧಿಕಾರ ಕಳೆದುಕೊಂಡಿದ್ದಾರೆ. ನಮ್ಮ ಸಿಎಂ ಬಿಎಸ್ ವೈ ವಿರೋಧ ಪಕ್ಷದವರನ್ನ ಕರೆದು ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ. ಸಮಸ್ಯೆ ಪರಿಹಾರ, ಲಾಕ್ ಡೌನ್ ಕುರಿತು ಸಲಹೆ ಕೇಳುತ್ತಿದ್ದೇವೆ. ಅವರು ನಮ್ಮ ಹತ್ತಿರ ಬಂದಾಗ ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ ಬೆಂಬಲ ನೀಡುತ್ತೇವೆ ಅನ್ನುತ್ತಾರೆ. ರಾಜಕೀಯ ಲಾಭಕ್ಕಾಗಿ ಸರ್ಕಾರ ICU ನಲ್ಲಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಫೈಲ್ಯೂರ್ ಆಗಿದೆ ಕೆಲಸ ನಿಭಾಯಿಸಿಲ್ಲ ಎಂಬ ಹೇಳಿಕೆಗಳು ಪೊಲಿಟಿಕಲ್ ಸ್ಟಂಟ್. ರಾಜಕಾರಣಕ್ಕೆ ಲಾಭ ಪಡೆದುಕೊಳ್ಳೋಕೆ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದಿದ್ದಾರೆ.
ಅಲ್ಲದೇ ಕೊರೊನಾ ವಿಚಾರಕ್ಕೆ ಇಡೀ ದೇಶ ತಲ್ಲಣಿಸುತ್ತಿದೆ ನಾವು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಇಡೀ ವಿಶ್ವವೇ ಕೋವಿಡ್ ನಿಯಂತ್ರಿಸೋಕೆ ಜಗಳ ಮಾಡುತ್ತಿದೆ. ವಿರೋಧ ಪಕ್ಷದವರು ಸ್ವಾರ್ಥಕ್ಕಾಗಿ ಸರ್ಕಾರದ ಮೇಲೆ ತಪ್ಪು ಹಾಕುವುದು ಶೋಭೆ ತರಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ವಿಶ್ವವೇ ಒಂದಾಗಿರುವಾಗ ಕಾಂಗ್ರೆಸ್, ಬಿಜೆಪಿ,ಜೆಡಿಎಸ್ ಎನ್ನದೆ ಕೆಲಸ ಮಾಡಿದ್ರೆ ಜನರ ಪ್ರಾಣ ಉಳಿಸಬಹುದು. ಅವರ ಬೆನ್ನು ಅವರೇ ತಟ್ಟಿಕೊಳ್ಳುವಂತೆ ಚಾಮರಾಜ ನಗರ ಪ್ರಕರಣವನ್ನ ಸರ್ಕಾರದ ಮೇಲೆ ಹಾಕುವುದು. ಮುಖ್ಯಮಂತ್ರಿ, ಉಸ್ತುವಾರಿ ಸಚಿವರ ಮೇಲೆ ಹಾಕಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತ್ತದ್ದಲ್ಲ. ಸಾವು ಎಲ್ಲರಿಗೂ ಸಾವೆ,ಅದಕ್ಕಾಗಿ ಎಲ್ಲರೂ ಪಶ್ಚಾತಾಪ ಪಡೋಣ.
ಇನ್ನುಮುಂದೆ ಆರೀತಿ ಆಗದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೊಣ. ವಿರೋಧ ಪಕ್ಷದವರು ನೀವೇನು ಮಾಡುತ್ತಿದ್ದೀರಿ,ನೀವು ಕೈಜೋಡಿಸಿ. ಸಮ್ಮನೆ ಹೇಳಿಕೆ ಕೊಟ್ಟು ತಪ್ಪಿಸಿಕೊಳ್ಳೋದಲ್ಲ . ಜನರ ಮೇಲೆ ಕಳಕಳಿ,ಪ್ರೀತಿ ಇದ್ದರೆ ನೀವು ಬಂದು ಕೆಲಸ ಮಾಡಿ. ನೀವೂ ಬಂದು ಕೆಲಸ ಮಾಡಿ ನಿಮ್ಮ ಜೊತೆ ನಾವು ಇರುತ್ತೇವೆ ಎಂದು ಕಿಡಿ ಕಾರಿದ್ಧಾರೆ. ಅಲ್ಲದೇ ಕೊವಿಡ್ ನಿಯಂತ್ರಿಸೋಕೆ ಕೈಜೋಡಿಸಿ ಕೆಲಸ ಮಾಡಲು ಆಹ್ವಾನಿಸಿದ್ದಾರೆ. ಇದೇ ವೇಳೆ ಲಾಕ್ ಡೌನ್ ವಿಚಾರವಾಗಿ ಮಾತನಾಡಿದ ಸಚಿವರು ಸಿಎಂ ನಿನ್ನೆ ಚರ್ಚಿಸಿದ್ದಾರೆ. ಕೇಂದ್ರ ಸರ್ಕಾರ ಪ್ರಧಾನಿ ಏನು ತೀರ್ಮಾನ ಮಾಡುತ್ತಾರೋ ನೋಡಬೇಕು ಎಂದಿದ್ದಾರೆ.