Siddaramaiah | ಶಾಲಾ ಮಕ್ಕಳಿಂದ 100 ರೂ ಸಂಗ್ರಹ : ಸಿದ್ದರಾಮಯ್ಯ ಕಿಡಿ
ಬೆಂಗಳೂರು : ಸರ್ಕಾರಿ ಶಾಲೆಯ ಬಡ ಮಕ್ಕಳ ಮೇಲೆ ಬಿಜೆಪಿ ಸರ್ಕಾರದ ಭ್ರಷ್ಟ ಕಣ್ಣು ಬಿದ್ದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಶಾಲಾಭಿವೃದ್ಧಿ ಹಾಗೂ ಶೈಕ್ಷಣಿಕ ಅಭಿವೃದ್ಧಿ ವೆಚ್ಚಕ್ಕಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪೋಷಕರಿಂದ ದಾನ, ದೇಣಿಗೆ ರೂಪದಲ್ಲಿ ಎಸ್ ಡಿಎಂಸಿಗಳ ಮೂಲಕ ಮಾಸಿಕ ತಲಾ 100 ರೂಪಾಯಿ ಗಣ ಸಂಗ್ರಹಕ್ಕೆ ಅವಕಾಶ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದು, ಸರ್ಕಾರಿ ಶಾಲೆಯ ಬಡ ಮಕ್ಕಳ ಮೇಲೆ ಬಿಜೆಪಿ ಸರ್ಕಾರದ ಭ್ರಷ್ಟ ಕಣ್ಣು ಬಿದ್ದಿದೆ.
ಕಮಿಷನ್ ಹೆಸರಲ್ಲಿ ರಾಜ್ಯದ ಖಜಾನೆ ಲೂಟಿ ಆಯಿತು, ಈಗ ಬಡ ಮಕ್ಕಳ ಪೋಷಕರ ಜೇಬಿಗೂ ಕತ್ತರಿ..! ಬಿಜೆಪಿ ಸರ್ಕಾರಕ್ಕೆ ಇಂಥಾ ದೈನೇಸಿ ಸ್ಥಿತಿ ಬರಬಾರದಿತ್ತು.
ವಿದ್ಯಾರ್ಥಿಗಳಿಗೆ ಹಾಲು, ಬಿಸಿ ಊಟ, ಸಮವಸ್ತ್ರ-ಶೂ, ವಿದ್ಯಾಸಿರಿ, ಹಾಸ್ಟೆಲ್ ಸೌಲಭ್ಯಗಳನ್ನು ನೀಡಿದ್ದು ನಾವು. ಅವರಿಂದ ಒಂದೊಂದನ್ನೇ ಕಿತ್ತುಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಈಗ ಅವರಿಂದ ದುಡ್ಡುಕಿತ್ತುಕೊಳ್ಳಲು ಹೊರಟಿದೆ.

ವೇದಿಕೆ ಮೇಲೆ ನಿಂತು ಧಮ್, ತಾಕತ್ ಎಂದು ಬೊಬ್ಬಿರಿಯುವವರು ವಿದ್ಯಾರ್ಥಿಗಳ ನೆರವಿನ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿ ತಮ್ಮ ತಾಕತ್ ತೋರಿಸಲಿ.
ನಮ್ಮ ಸರ್ಕಾರ ವಿದ್ಯಾಸಿರಿ, ಅರಿವು, ಶೂ ಭಾಗ್ಯ ವಿದೇಶಿ ವ್ಯಾಸಂಗಕ್ಕೆ ಆರ್ಥಿಕ ನೆರವು, ಶೈಕ್ಷಣಿಕ ಸಾಲ ಯೋಜನೆ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ನೀಡಿದರೆ, ಈಗಿನ ಬಿಜೆಪಿ ಸರ್ಕಾರ ಓದುವ ಮಕ್ಕಳಿಗೆ ತ್ರಿಶೂಲ ದೀಕ್ಷೆ ನೀಡಿ ಅವರ ಬದುಕನ್ನು ಕತ್ತಲಿಗೆ ದೂಡುತ್ತಿದೆ.
ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಪೋಷಕರಿಂದ ಹಣ ಸಂಗ್ರಹಿಸುವಂತೆ ಹೊರಡಿಸಿರುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಮತ್ತು ಅನುದಾನ ಕೊರತೆಯಿಂದ ಸ್ಥಗಿತಗೊಂಡಿರುವ ಎಲ್ಲಾ ಶೈಕ್ಷಣಿಕ ಯೋಜನೆಗಳಿಗೆ ಪುನರ್ ಚಾಲನೆ ನೀಡಬೇಕು ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.








