ಮತ್ತೆ ಜಾತಿಗಣತಿ ಒಪ್ಪಿಕೊಳ್ಳುವಂತೆ ಸರಕಾರಕ್ಕೆ ಒತ್ತಾಯಿಸಿದ ಸಿದ್ದರಾಮಯ್ಯ Saaksha Tv
ಬೆಂಗಳೂರು: ಮತ್ತೆ ಜಾತಿಗಣತಿ ಒಪ್ಪಿಕೊಳ್ಳುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸುವ ಅವರು ಸುಪ್ರೀಂ ಕೋರ್ಟ್ ಇತ್ತೀಚಿನ ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿನ ಹಿಂದುಳಿದ ಜಾತಿಯ ರಾಜಕೀಯ ಮೀಸಲಾತಿಗೆ ಎದುರಾಗುವ ಅಡ್ಡಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯಿಂದ ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಮೂರು ಹಂತದ ಪರಿಶೀಲನೆ ನಡೆಸಿ ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ದೇಶದಲ್ಲಿಯೇ ಮೊದಲ ಬಾರಿ ಮನೆಮನೆಗೆ ತೆರಳಿ ರಾಜ್ಯದಲ್ಲಿ ನಡೆಸಲಾಗಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳಬಹುದೆಂಬ ಭರವಸೆ ನನಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯ ವಕೀಲ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಕಾರ್ಯ ವ್ಯಾಪ್ತಿಯಲ್ಲಿ ರಾಜಕೀಯ ಕ್ಷೇತ್ರ ಸೇರಿಲ್ಲದೆ ಇದ್ದರೂ ಅದು ರಾಜ್ಯದ ಎಲ್ಲ ಜಾತಿ ಜನರ ರಾಜಕೀಯ ಪ್ರಾತಿನಿಧ್ಯದ ಮಾಹಿತಿಯನ್ನು ಕೂಡಾ ಸಂಗ್ರಹಿಸಿದೆ. ರಾಜ್ಯ ಸರ್ಕಾರ ಈ ಅಂಶವನ್ನು ಗಮನಕ್ಕೆ ತಂದರೆ ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಳ್ಳಬಹುದು ಎಂದು ಹೇಳಿದರು.
ರಾಜ್ಯದ ಬಿಜೆಪಿ ಸರ್ಕಾರ ಕಾಲವ್ಯಯ ಮಾಡದೇ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ತಕ್ಷಣ ಒಪ್ಪಿಕೊಂಡು ಜಾರಿಗೆ ತರಬೇಕು. ಇದೇ ವರದಿಯನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್ ಮುಂದೆ ತನ್ನ ವಾದ ಮಂಡಿಸಿ ಹಿಂದುಳಿದ ಜಾತಿಗಳಿಗೆ ಆಗಲಿರುವ ಅನ್ಯಾಯವನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ.