ಇದು ರಾಜಕೀಯ ರತ್ನ ಅಲ್ಲ, ಕ್ರೀಡಾ ರತ್ನ : ಸಿದ್ದುಗೆ ಅಶ್ವಥ್ ನಾರಾಯಣ್ ಡಿಚ್ಚಿ
ಬೆಂಗಳೂರು : ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮೇ.ಧ್ಯಾನ್ ಚಂದ್ ಪ್ರಶಸ್ತಿ ಎಂದು ಮರುನಾಮಕಾರಣ ಮಾಡಿರುವ ವಿಚಾರ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಇದು ರಾಜಕೀಯ ದ್ವೇಷ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಇದಕ್ಕೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಶ್ವತ್ಥ್ ನಾರಾಯಣ್,
ಇದು ರಾಜಕೀಯ ರತ್ನ ಅಲ್ಲ, ಕ್ರೀಡಾ ರತ್ನ. ಇದರಲ್ಲಿ ರಾಜಕೀಯ ತರಬಾರದು, ಧ್ಯಾನ್ ಚಂದ್ ಮಹಾನ್ ಕ್ರೀಡಾಪಟು, ಕ್ರೀಡಾಪಟುಗಳಿಗೆ ಅವರು ಸ್ಫೂರ್ತಿ. ನಾವು ಯಾವುದೇ ಕ್ರೀಡಾಂಗಣದ ಹೆಸರು ಬದಲಿಸಿಲ್ಲ. ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಿಸಿರೋದು. ಇದರಲ್ಲಿ ಕಾಂಗ್ರೆಸ್‍ನವರು ರಾಜಕೀಯ ಮಾಡುವುದು ಸರಿಯಲ್ಲ ಎಂದು ಟಾಂಗ್ ನೀಡಿದರು.
ಇನ್ನು ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿ, ಬಿಜೆಪಿಯನ್ನು ಅಲ್ಪಸಂಖ್ಯಾತ ವಿರೋಧಿ ಅಂತಾ ಬಿಂಬಿಸಲಾಗುತ್ತಿದೆ. ಅದು ಸುಳ್ಳು, ನಾವೆಲ್ಲ ಒಗ್ಗಟ್ಟಾಗಿ ನಡೆಯಬೇಕು. ನಮ್ಮ ದೇಶಕ್ಕೆ ಏನೇ ಸಮಸ್ಯೆ ಆದರೂ, ನಾವೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಖಾತೆ ಕ್ಯಾತೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟ ರಚನೆಯಾದಾಗ, ಖಾತೆ ಹಂಚಿಕೆಯಾದಾಗ ಅಸಮಾಧಾನ ಬರುವುದು ಸಹಜ. ಈ ಬಗ್ಗೆ ಸಿಎಂ ಮಾತಾಡಿದ್ದಾರೆ, ಎಲ್ಲವನ್ನ ಸರಿಪಡಿಸಿಕೊಂಡು ಒಟ್ಟಾಗಿ ಹೋಗುವ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.









