Siddaramaiah | ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಹಿಜಾಬ್ ವಿವಾದ
ಆಡಳಿತಾರೂಢ ಬಿಜೆಪಿ ಸರ್ಕಾರ ಜನರ ಗಮನ ಬೇರೆಡೆಗೆ ಸೆಳೆದು ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಿಜಾಬ್ ಎಂಬ ಹೊಸ ವಿವಾದ ಹುಟ್ಟುಹಾಕಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸಂಘ ಪರಿವಾರದವರು ತಾವೇ ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ಕೇಸರು ಶಾಲು ಧರಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಇಂಥವರ ವಿರುದ್ಧ ಮುಖ್ಯಮಂತ್ರಿಗಳು ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಸ್ಲಾಂ ಧರ್ಮದ ಪ್ರಕಾರ ಹಿಜಾಬ್ ಧರಿಸುವುದು ಒಂದು ಪದ್ಧತಿ. ಕುರಾನ್ ನಲ್ಲಿಯೂ ಇದರ ಉಲ್ಲೇಖವಿದೆ. ಇದರಿಂದ ಬೇರೆಯವರಿಗೆ ಏನು ತೊಂದರೆ? ಇದನ್ನೇ ನೆಪವಾಗಿಟ್ಟುಕೊಂಡು ಹೆಣ್ಣುಮಕ್ಕಳನ್ನು ಕಾಲೇಜಿನ ಒಳಬರಲು ಬಿಡದೆ ಇರುವ ಪ್ರಿನ್ಸಿಪಾಲ್ ನಡೆ ಅಮಾನವೀಯವಾದುದು. ಅವರನ್ನು ಈ ಕೂಡಲೇ ವಜಾಗೊಳಿಸಬೇಕು.
ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳುತ್ತಾರೆ, ರಾಷ್ಟ್ರಧ್ವಜ ಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದನ್ನು ಸಮರ್ಥಿಸುತ್ತಾರೆ. ಇಂತಹವರು ರಾಜಕೀಯದಲ್ಲಿ ಮಾತ್ರವಲ್ಲ ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್.
ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ದೇಶದ ಮಹಿಳೆಯರು, ದಲಿತರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು ಸಂಕಷ್ಟ ಎದುರಿಸುತ್ತಿದ್ದಾರೆ. ದೇಶ, ದೇಶದ ಜನತೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ ಹೊಣೆ ಕಾಂಗ್ರೆಸ್ ಪಕ್ಷದ ಮೇಲಿದೆ.
ಸಾಧನೆಯ ಬಲದಿಂದ ಮತಕೇಳುವ ಧೈರ್ಯ ಬಿಜೆಪಿ ನಾಯಕರಿಗೆ ಇಲ್ಲ. ಭ್ರಷ್ಟಾಚಾರದಿಂದ ರೋಸಿಹೋಗಿರುವ ಗುತ್ತಿಗೆದಾರರ ಸಂಘದವರು ಸಚಿವರ 40% ಕಮಿಷನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದಾರೆ. ಚೌಕಿದಾರ್ ಪ್ರಧಾನಿ ಇಲ್ಲಿಯ ವರೆಗೆ ಉತ್ತರಿಸಿಲ್ಲ. ಏನಿದರ ಅರ್ಥ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.









