ಬೆಂಗಳೂರು: ಕೊರೊನಾ ಮೆಡಿಕಲ್ ಉಪಕರಣ ಖರೀದಿಯಲ್ಲಿ 2 ಸಾವಿರ ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ರಾಜ್ಯ ಬಿಜೆಪಿ ಸರ್ಕಾರದ `ಪಂಚ’ ಸಚಿವರು ಸಾರಾಸಗಟಾಗಿ ತಳ್ಳಿ ಹಾಕುವ ಮೂಲಕ ಲೆಕ್ಕ ಚುಕ್ತಾ ಮಾಡಿದ್ದಾರೆ.
ಸಚಿವರಾದ ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಡಾ.ಕೆ ಸುಧಾಕರ್, ಡಿಸಿಎಂ ಅಶ್ವತ್ಥ ನಾರಾಯಣ್, ಶ್ರೀರಾಮುಲು ಹಾಗೂ ಶಿವರಾಮ್ ಹೆಬ್ಬಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಸುದ್ದಿಗೋಷ್ಠಿಗೆ ಬಾಕ್ಸ್ ತುಂಬಾ ದಾಖಲೆ ತಂದು ಉಲ್ಲೇಖಿಸಿದ ಕಂದಾಯ ಸಚಿವ ಆರ್. ಅಶೋಕ್, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸರ್ಕಾರದ ಮೇಲೆ 2000 ಕೋಟಿ ರೂ. ಹೆಚ್ಚು ಭ್ರಷ್ಟಾಚಾರದ ಅರೋಪ ಮಾಡಿದ್ದಾರೆ. 50 ವರ್ಷಗಳ ಕಾಲ ರಾಜ್ಯವಾಳಿದ ಕಾಂಗ್ರೆಸ್ ಪಕ್ಷ ನೂರಾರು, ಸಾವಿರಾರು ಹಗರಣ ಮಾಡಿದೆ. ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ, ಜನರು ನೋವಿನಲ್ಲಿರುವ ಸಂದರ್ಭದಲ್ಲಿ ಜನರ ಮನಸ್ಸಿನಲ್ಲಿ ವಿಷ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಆದರೆ, 2019ರ ಜನವರಿಯಲ್ಲಿ 8 ವೆಂಟಿಲೇಟರ್ಗಳನ್ನು 21.7 ಲಕ್ಷದಂತೆ ಖರೀದಿ ಮಾಡಿದರು. ಹಾಗಾದರೆ ಅವುಗಳನ್ನು ಚಂದ್ರಲೋಕದಿಂದ ತಂದ್ರಾ, ಆಗ ಯಾರ ಸರ್ಕಾರ ಇತ್ತು, ಯಾವ ತುರ್ತು ಪರಿಸ್ಥಿತಿ ಎಂದು ಪ್ರಶ್ನಿಸಿದರು.
ಕೊರೊನಾ ಕಾರ್ಯಕ್ಕೆ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ 232 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಖರ್ಚಾಗಿರುವುದು ಕೇವಲ 56 ಕೋಟಿ ಮಾತ್ರ. ಹೀಗಾಗಿ ಕಾಂಗ್ರೆಸ್ನವರ ಬುದ್ದಿಗೆ ಸ್ಯಾನಿಟೈಸ್ ಮಾಡಿಕೊಳ್ಳಲಿ. ಯುದ್ಧದಂತಹ, ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬುದನ್ನು ಅರಿತುಕೊಳ್ಳಲಿ ಎಂದು ತಿರುಗೇಟು ನೀಡಿದರು.
ನಮ್ಮ ಪಕ್ಷ ಸುಳ್ಳಿನ ಸರದಾರರ ಪಕ್ಷವಲ್ಲ. ಅಪ್ಪಟ ಸುಳ್ಳು, ಬೇಜಬಾವ್ದಾರಿಯ ವಿರೋಧ ಪಕ್ಷವಾಗಿ, ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡಿ ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ಹೇಡಿತನದ ಕೆಲಸ ಮಾಡಿದ್ದಾರೆ. ಲೆಕ್ಕವನ್ನು ವಿಧಾನಸಭೆಯಲ್ಲಿ, ಮನೆಗೆ ಬೇಕಾದರೆ ತಂದು ಕೊಡುತ್ತೇವೆ ಎಂದು ಅಶೋಕ್ ಹೇಳಿದರು.
ಗಾಳಿಯಲ್ಲಿ ಗುಂಡು ಹೊಡೆಯುವ ಪ್ರಯತ್ನ
ಕೊರೊನಾದ ಈಗಿನ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ನಿಂದ ಗಾಳಿಯಲ್ಲಿ ಗುಂಡು ಹೊಡೆಯುವ ಪ್ರಯತ್ನ ನಡೆದಿದೆ.
ಮಾರ್ಚ್ನಲ್ಲಿ 1.30ಲಕ್ಷ ಪಿಪಿಇ ಕಿಟ್ಗಳನ್ನು 330ರಂತೆ ಖರೀದಿ ಮಾಡಿದ್ದೇವೆ. ಸಂಕಷ್ಟದ ಮಾರ್ಚ್, ಏಪ್ರಿಲ್ ತಿಂಗಳಲ್ಲಿನ ಬೆಲೆ ಬಿಟ್ಟು ಈಗಿನ ಲೆಕ್ಕ ಹಿಡಿದುಕೊಂಡು ಆರೋಪ ಮಾಡುತ್ತಿದ್ದಾರೆ. ಅಂಬ್ಯುಲೆನ್ಸ್ನಲ್ಲಿ ಹಾಕುವ ಸಾಮಾನ್ಯ ವೆಂಟಿಲೇಟರ್ ಬೆಲೆಯನ್ನು ಐಸಿಯುನಲ್ಲಿ ಹಾಕುವ ವೆಂಟಿಲೇಟರ್ ಎಂದು ಅಜ್ಞಾನ ಮೆರೆದಿದ್ದಾರೆ. ಈ ಮುಲಕ ಕಾಂಗ್ರೆಸ್ನಾಯಕರು ಗಾಳಿಯಲ್ಲಿ ಗುಂಡು ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಸುಳ್ಳನ್ನೇ ಹೇಳಿ ಸತ್ಯ ಎಂದು ಬಿಂಬಿಸುವ ದುರುದ್ದೇಶವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಡಿಸಿಎಂ ಡಾ.ಅಶ್ವತ್ಥ ನಾರಾಯಣ ಸ್ಪಷ್ಟನೆ ನೀಡಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಸಿದ್ದರಾಮಯ್ಯ ಆರೋಪ ನಿರಾಧಾರ, ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದರು.
1 ರೂಪಾಯಿ ಹಗರಣವಾದ್ರೂ ನೇಣಿಗೇರಲು ಸಿದ್ಧ..ಶೇಮ್ ಶೇಮ್
ಕೊರೊನಾ ನಿಯಂತ್ರಣ, ಸಾವು ನೋವು ಹೇಗೆ ತಪ್ಪಿಸಬೇಕೆಂದು ಇಡೀ ವಿಶ್ವ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಲೆಕ್ಕ ಕೇಳುತ್ತಿರುವುದು ವಿಪರ್ಯಾಸ. ಇದು ನಾಚಿಕೆಯಾಗುವಂತಹ ಸಂಗತಿ, ಯಾವ ದೇಶದಲ್ಲೂ ಇಂತಹ ಸ್ಥಿತಿ ಇಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಇಟ್ಟುಕೊಂಡು ನಮ್ಮ ತಟ್ಟೆಯಲ್ಲಿ ನೊಣ ಹುಡುಕಲು ಬಂದಿದ್ದೀರಿ. ಸಿದ್ದರಾಮಯ್ಯ ಕೊಟ್ಟ ಲೆಕ್ಕ ಸಂಪೂರ್ಣ ಸುಳ್ಳು. ಇದು ಶೇಮ್ ಶೇಮ್ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವಾಗ್ದಾಳಿ ನಡೆಸಿದರು.
140 ವೆಂಟಿಲೇಟರ್ಗಳನ್ನು 13 ಲಕ್ಷ ಕೊಟ್ಟು ಖರೀದಿ ಮಾಡಿದ್ದೇವೆ. ವಿಶ್ವದ ನಂ.1 ಕಂಪನಿಯ ವೆಂಟಲೇಟರ್ನ್ನು ಖರೀದಿ ಮಾಡಿದ್ದೇವೆ. ಕೊರೊನಾ ಸಂದರ್ಭದಲ್ಲಿ ಆರೋಪ ಮಾಡುತ್ತಿರುವುದು ರಾಜ್ಯದ ಜನರನ್ನು ದಿಕ್ಕು ತಪ್ಪಿಸಿ ರಾಜಕೀಯ ಬೇಳೆ ಬೆಳೆಸಿಕೊಳ್ಳು ಹೊರಟಿರುವುದು ಅಪರಾಧ. 1 ರೂಪಾಯಿ ಹಗರಣವಾದ್ರೂ ನೇಣಿಗೇರಲು ಸಿದ್ಧ ಎಂದು ಸವಾಲು ಹಾಕಿದರು.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಲೆಕ್ಕ ಕೇಳುವ ಮೂಲಕ ಸಿದ್ದರಾಮಯ್ಯ ಐತಿಹಾಸಿಕ ಪ್ರಮಾದ ಎಸಗಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರೇ ತಪ್ಪು ಮಾಡಿದ್ದೀರಿ, ನೀವು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತೀರಿ ಎಂದು ತಿರುಗೇಟು ನೀಡಿದರು.
ಕಾರ್ಮಿಕ ಇಲಾಖೆಯಿಂದ 892 ಕೋಟಿ ಖರ್ಚು
ಕಾರ್ಮಿಕ ಇಲಾಖೆಯಿಂದ 1000 ಕೋಟಿ ಖರ್ಚು ಮಾಡಲಾಗಿದೆ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ವಲಸೆ ಕಾರ್ಮಿಕರಿಗೆ ರೈಲು ಹಾಗೂ ಬಸ್ ಪ್ರಯಾಣ, ಊಟ, ವಸತಿ ಸೇರಿದಂತೆ ಖರ್ಚು ಮಾಡಿದ್ದೇ 892 ಕೋಟಿ. ಇದರಲ್ಲಿ 16.40 ಲಕ್ಷ ಕಟ್ಟಡ ಕಾರ್ಮಿಕರಿಗೆ 5 ಸಾವಿರ ರೂ.ನಂತೆ
816 ಕೋಟಿ ರೂ.ಗಳನ್ನು ಅವರ ಅಕೌಂಟಿಗೆ ಜಮಾ ಮಾಡಿದ್ದೇವೆ. ಹೀಗಿರುವಾಗ ಸಿದ್ದರಾಮಯ್ಯ ಅವರ 1000 ಕೋಟಿ ಲೆಕ್ಕ ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಕೈಕಟ್ಟಿಕೊಂಡು ಮೌನರಾದ ಸಚಿವ ಬಿ.ಶ್ರೀರಾಮುಲು
ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರೂ ಆರೋಗ್ಯ ಸಚಿವ ಶ್ರೀರಾಮುಲು ಯಾವುದೇ ಮಾತನಾಡದೇ ಮೌನಕ್ಕೆ ಜಾರಿದ್ದರು. ಆರೋಗ್ಯ ಇಲಾಖೆಯಲ್ಲಿನ ಮಾಹಿತಿಯನ್ನು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದರೇ ಹೊರತು ಶ್ರೀರಾಮುಲು ತುಟಿ ಬಿಚ್ಚಲೇ ಇಲ್ಲ.
ಮೂರು ದಿನಗಳ ಹಿಂದೆ ಸಿದ್ದರಾಮಯ್ಯ ಆರೋಪಗಳಿಗೆ ಒಂದೂವರೆ ಗಂಟೆಗಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶ್ರೀರಾಮುಲು ಮಾತ್ರ, ಇಂದು ಮೌನಕ್ಕೆ ಜಾರಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೋವಿಡ್ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷನಾಗಿ ನನಗೆ ಯಾವುದೇ ಬೆಲೆ ಸಿಗುತ್ತಿಲ್ಲ. ನನ್ನನ್ನು ಕಡೆಗಣಿಸಲಾಗುತ್ತಿದೆ ಎಂಬ ಶ್ರೀರಾಮುಲು ಅಸಮಾಧಾನ ಇಂದಿನ ಸುದ್ದಿಗೋಷ್ಠಿಯಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.