ಬೆಂಗಳೂರು : ವಿಶ್ವನಾಥ್ ಗೆ ಟಿಕೆಟ್ ಕೈ ತಪ್ಪಿದಾಗಲೆಲ್ಲಾ ನಾನೇ ನೆನಪಾಗುತ್ತೇನೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ ಕೈ ತಪ್ಪಿದಾಗ ಸಿದ್ದರಾಮಯ್ಯ ನೆನಪಾಗೋದಲ್ಲ, ಅವರು ಸಿಎಂ ಆಗಿದ್ದಕ್ಕೆ ನನ್ನನ್ನ ನೆನಪಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ಹೇಳಿಕೆಗೆ ಹಳ್ಳಿಹಕ್ಕಿ ತಿರುಗೇಟು ನೀಡಿದರು.
ಸಿದ್ದರಾಮಯ್ಯರನ್ನು ಕಾಂಗ್ರೆಸ್ ಕರೆತಂದಿದ್ದು ನಾನು, ಇದನ್ನ ಸಿದ್ದರಾಮಯ್ಯ ಎಲ್ಲಿಯೂ ಹೇಳುವುದಿಲ್ಲ. ಪಾಪ ಅವರಿಗೆ ಕೃತಜ್ಞತಾ ಭಾವ ಇಲ್ಲ. ವಿಶ್ವನಾಥ್ ನಿಂದ ನಾನು ಸಿಎಂ ಆಗಲು ಸಾಧ್ಯವಾಯಿತು ಅಂತ ಅಪ್ಪಿತಪ್ಪಿ ಎಲ್ಲಿಯೂ ಹೇಳುವುದಿಲ್ಲ. ನನಗೆ ಟಿಕೆಟ್ ಕೈ ತಪ್ಪಲು ಅವರು ಹೇಗೆ ಕಾರಣ ಅಂತ ಸಂದರ್ಭ ಬಂದಾಗ ಹೇಳುತ್ತೀನಿ. ಅವರ ಮಾತುಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಮೊನ್ನೆ ನನಗೆ ಪರಿಷತ್ ಟಿಕೆಟ್ ತಪ್ಪಿದ್ದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಹೆಚ್.ವಿಶ್ವನಾಥ್ ಅವರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವಿಶ್ವನಾಥ್ ಗೆ ಟಿಕೆಟ್ ತಪ್ಪಿಸೋದ್ದಕ್ಕೆ ನಾನೇನು ಬಿಜೆಪಿ ಹೈಕಮಾಂಡಾ.. ಅವನಿಗೆ ಬುದ್ಧಿ ಇಲ್ಲ ಎಂದು ಗುಡುಗಿದ್ದರು.








