ಬೊಮ್ಮಾಯಿಯನ್ನು ಬದಲಾಯಿಸಲು RSSನವರು ಹೊರಟಿದ್ದಾರೆ : ಸಿದ್ದರಾಮಯ್ಯ
ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿ RSSನವನಲ್ಲ, ಹೀಗಾಗಿ ಬೊಮ್ಮಾಯಿಯನ್ನು ಬದಲಾಯಿಸಲು RSSನವರು ಹೊರಟಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಜನತಾ ಪರಿವಾರದವನು. ನಮ್ಮ ಜೊತೆಯಲ್ಲೇ ಇದ್ದ. ಆದರೆ ಅವನು ನಮ್ಮ ಪಟ್ಟುಗಳನ್ನು ಕಲಿಯಲಿಲ್ಲ ಎಂದು ಹೇಳಿದರು.
ಇನ್ನೂ ರಾಜ್ಯದಲ್ಲಿ ರಾಜ್ಯ ಸರ್ಕಾರ ಸತ್ತು ಹೋಗಿದೆ. ಗೃಹ ಸಚಿವರು ಅತ್ಯಂತ ಅಸಮರ್ಥ ಸಚಿವ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಇವರಿಗೆ ಆಡಳಿತ ಮಾಡುವುದಕ್ಕೆ ಬರುತ್ತಿಲ್ಲ. ಎಲ್ಲ ಪರೀಕ್ಷೆಗಳಲ್ಲೂ ದುಡ್ಡು ದುಡ್ಡು ಎನ್ನುತ್ತಿದ್ದು, ದುಡ್ಡು ಕೊಟ್ಟು ಬಂದ ಅಧಿಕಾರಿಗಳು ಇವರ ಮಾತು ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿ.ಎಲ್.ಸಂತೋಷ್ ಅವರಿಗೆ ತಿರುಗೇಟು ನೀಡಿದ ಅವರು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಕ್ಕಳು ಯಾರು? ಅಪ್ಪ-ಮಕ್ಕಳು ಅಲ್ವಾ? ಅಂದ್ರೆ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆಯಾ? ಎಂದು ಪ್ರಶ್ನಿಸಿದರು.
ಹಾಗೇ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ. ಆದರೆ ಸರ್ಕಾರಕ್ಕೆ ನಿಭಾಯಿಸಲು ಬರುತ್ತಿಲ್ಲ. ಕಲ್ಲಿದ್ದಲು ಹೆಚ್ಚಾಗಿಯೇ ಇದೆ. ಆದರೆ ಅದನ್ನು ಹಂಚಿಕೆ ಮಾಡಲು ಇವರಿಗೆ ಬರುತ್ತಿಲ್ಲ. ಇಂತಹ ಆಡಳಿತದಿಂದ ಕಷ್ಟ ಎದುರಾಗುತ್ತಿದೆ. ಕೃತಕ ಕೊರತೆ ಸೃಷ್ಟಿಯನ್ನು ಮಾಡುತ್ತಿದ್ದಾರೆ. ದಿಢೀರನೆ ಕಲ್ಲಿದ್ದಲು ಉತ್ಪಾದನೆ ನಿಲ್ಲಲು ಹೇಗೆ ಸಾಧ್ಯ ಎಂದು ಕಿಡಿಕಾರಿದರು.









