ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವಿಟ್ಟರ್ ನಲ್ಲಿ ಶುಭಾಶಯ ಕೋರಿದ್ದಾರೆ. “ಕೆಪಿಸಿಸಿಯ ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳು. ನೂತನ ಅಧ್ಯಕ್ಷರನ್ನು ನೇಮಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಕೃತಜ್ಞತೆಗಳು. ಶಿವಕುಮಾರ್ ಅವರಿಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಹಕಾರ ನೀಡಿ ಪಕ್ಷಕ್ಕೆ ಇನ್ನಷ್ಟು ಬಲತುಂಬಬೇಕೆಂದು ಕೋರುತ್ತಿದ್ದೇನೆ” ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಕೆಪಿಸಿಸಿ ನೂತನ ಅಧ್ಯಕ್ಷರಾದ ಕೂಡಲೇ ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿಧಾನಸೌಧದಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾಗಿ ‘ನಿಮಗೂ ಕೂಡ ಕಂಗ್ರಾಟ್ಸ್ ಸಾರ್..’ಎಂದರು. ಈ ವೇಳೆ ಡಿಕೆಶಿಗೆ ಶುಭಾಶಯ ಕೋರಿದ ಸಿದ್ದರಾಮಯ್ಯ, ನನಗ್ಯಾಕಯ್ಯ ಶುಭಾಶಯ ಎಂದು ಪ್ರಶ್ನಿಸಿದರು. ಆಗ “ನೀವು ಕೂಡ ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕ ಮತ್ತು ವಿರೋಧ ಪಕ್ಷದ ನಾಯಕರಾಗಿ ಮುಂದುವರಿಸುತ್ತಿದ್ದೀರಿ ಅದಕ್ಕೆ ಸಾರ್” ಎಂದು ಡಿಕೆಶಿ ಉತ್ತರಿಸಿದರು. ಇದಕ್ಕೆ “ನಾನು ಈಗಾಗಲೇ ಅಪೋಸಿಷನ್ ಲೀಡರ್ ಇದ್ದೀನಲ್ಲಯ್ಯಾ” ಎಂದು ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು. ಜತೆಗೆ ನನಗೆ ಈ ವಿಷಯ ಮಧ್ಯಾಹ್ನವೇ ಫೋನ್ ಮೂಲಕ ಗೊತ್ತಾಯ್ತು ಎಂದರು.