Siddaramaiah | ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಅವರ ಪಕ್ಷದ ಶಾಸಕರು, ಸಚಿವರೇ ಸಾಕ್ಷಿ
ಬೆಂಗಳೂರು : ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಅವರ ಪಕ್ಷದ ಶಾಸಕರು, ಸಚಿವರೇ ಸಾಕ್ಷಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಅವರ ಪಕ್ಷದ ಶಾಸಕರು, ಸಚಿವರೇ ಸಾಕ್ಷಿ ನೀಡುತ್ತಿದ್ದಾರೆ. ಇವರನ್ನು ಸಾಲಾಗಿ ವೇದಿಕೆಯಲ್ಲಿ ನಿಲ್ಲಿಸಿ ಜನಸ್ಪಂದನ ಮಾಡಿದರೆ ಕಾರ್ಯಕ್ರಮ ಯಶಸ್ವಿಯಾಗಬಹುದು. ಬೇಕಿದ್ದರೆ ಗುತ್ತಿಗೆದಾರರ ಸಂಘದ ಅಧ್ಯಕ್ಷರನ್ನೂ ಕರೆಸಿ.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 2 ಸಾವಿರ ಕೋಟಿ ಕಿಕ್ ಬ್ಯಾಕ್ ಆರೋಪ ಮಾಡಿದ್ದು ಬಿಜೆಪಿ ಶಾಸಕ ಎಚ್.ವಿಶ್ವನಾಥ್. ಪಿ.ಎಸ್.ಐ ನೇಮಕಾತಿ ಹಗರಣದಲ್ಲಿ ವಸೂಲಿ ಮಾಡಿದ ಲಂಚವನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದು ಹೇಳಿದ್ದು ಬಿಜೆಪಿ ಶಾಸಕ ಬಸವರಾಜ ದಡೆಸುಗೂರ್.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮತ್ತವರ ಮಕ್ಕಳು ನನ್ನ ಖಾತೆಯಲ್ಲಿ ಕೈ ಆಡಿಸುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದು ಆಗಿನ ಸಚಿವ ಕೆ.ಎಸ್.ಈಶ್ವರಪ್ಪ. 40% ಕಮಿಷನ್ ಕೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡದ್ದು ಈಶ್ವರಪ್ಪನಿಗೆ ಆತ್ಮೀಯನಾಗಿದ್ದ ಗುತ್ತಿಗೆದಾರ.

ಸರ್ಕಾರಿ ಕಾಮಗಾರಿಗಳಲ್ಲಿ 40% ಕಮಿಷನ್ ನೀಡಬೇಕಾಗುತ್ತದೆ, ಇಲ್ಲದೆ ಇದ್ದರೆ ಬಿಲ್ ಪಾಸ್ ಮಾಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಧೈರ್ಯದಿಂದ ಬಹಿರಂಗವಾಗಿಯೇ ಆರೋಪ ಮಾಡುತ್ತಿರುವುದು ನಾವಲ್ಲ, ರಾಜ್ಯದ ಸರ್ಕಾರಿ ಗುತ್ತಿಗೆದಾರರ ಸಂಘದವರು.
ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ರುಪ್ಸಾ) ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಲಂಚ ಪಡೆದು ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡಿದ್ದ ಇಲಾಖೆಯೇ ಅಕ್ರಮ ಮುಚ್ಚಿಹಾಕಲು ಲಂಚ ಕೇಳುತ್ತಿದೆಯಂತೆ. ಇದರಲ್ಲಿ ಬಿ.ಸಿ.ನಾಗೇಶ್ ಪಾಲೆಷ್ಟು ಎಂದು ಪ್ರಶ್ನಿಸಿದ್ದಾರೆ.








