ಕೇವಲ ವಿಪಕ್ಷ ನಾಯಕ ಸ್ಥಾನಕ್ಕೆ ಸೀಮಿತವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಊಸರವಳ್ಳಿ ವ್ಯಕ್ತಿತ್ವದವರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದ ಗಂಗಾವತಿಯ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಕಾಂಗ್ರೆಸ್ ನಲ್ಲಿ ಇದ್ದಾಗ ಯಾವುದೇ ಆರೋಪ ಮಾಡುತ್ತಿರಲಿಲ್ಲ. ಆದರೆ ಬಿಜೆಪಿ ಪಕ್ಷಕ್ಕೆ ಅವರು ಬರುತ್ತಿದ್ದಂತೆಯೇ ಗಣಿ ಹಗರಣ ಎಂದು ಖ್ಯಾತೆ ತೆಗೆಯುತ್ತಿದ್ದಾರೆ ಎಂದು ಟೀಕಿಸಿದ್ರು.
ಊಸರವಳ್ಳಿ ಕೇವಲ ತನ್ನ ಜೀವ ರಕ್ಷಣೆಗೆ ಬಣ್ಣ ಬದಲಿಸುತ್ತದೆ. ಆದರೆ ಸಿದ್ದರಾಮಯ್ಯ ಹಗಲು ಒಂದು ರೀತಿ ಸಂಜೆ ಒಂದು ರೀತಿ ಬಣ್ಣ ಬದಲಿಸುವ ಮೂಲಕ ತಮ್ಮ ನಿಜಬಣ್ಣ ಬಯಲು ಮಾಡಿಕೊಳ್ಳುತ್ತಿದ್ದಾರೆ ಎಂದು ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಇನ್ನು, 17 ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರುವ ಸಾಧ್ಯತೆ ಎಂಬ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಆಳ್ವಾ ಯಾರು? ಎಂದು ಪ್ರಶ್ನಿಸಿದ್ರು. ಸದ್ಯ ಕಾಂಗ್ರೆಸ್ ನಲ್ಲಿ ಇರುವ ಶಾಸಕರನ್ನು ಉಳಿಸಿಕೊಂಡರೆ ಸಾಕು. ಮೊದಲು ಈ ಬಗ್ಗೆ ಕಾಂಗ್ರೆಸ್ ಗಮನ ಹರಿಸಬೇಕು ಎಂದು ಪಾಟೀಲ್ ಸಲಹೆ ನೀಡಿದ್ರು.








