ಬೆಂಗಳೂರು: ಕೊರೊನಾ ಸೋಂಕಿನಿಂದ ರಾಜ್ಯದ ಜನರು ಆತಂಕಕ್ಕೆ ಒಳಗಾಗಿದ್ದು, ಈ ವೈರಸ್ ಗೆ ಕಲಬುರಗಿಯಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಯಸ್ಸಾದ ವ್ಯಕ್ತಿ ಕಲಬುರಗಿಯಲ್ಲಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದು ಇಡೀ ರಾಜ್ಯ ದೇಶಕ್ಕೆ ಗೊತ್ತಾಗಿದೆ. ಆದರೆ ಆರೋಗ್ಯ ಸಚಿವರು ಮಾಹಿತಿ ಕೊಡುತ್ತಿಲ್ಲ ಎಂದು ಗರಂ ಆದರು.
ಇನ್ನು ಶ್ರೀರಾಮುಲು ಪ್ರತೀ ನಿಮಿಷ ಇಲಾಖೆಯ ಅಧಿಕಾರಿಗಳು ಸಂಪರ್ಕ ಸಾಧಿಸಿ ಕೆಲಸ ಮಾಡಬೇಕು. ಆರೋಗ್ಯ ಸಚಿವ ಹಾಗೂ ವೈದ್ಯಕೀಯ ಸಚಿವರಿಗೆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಅಧಿಕಾರಿಗಳು ಅವರಿಗೆ ಮಾಹಿತಿ ಕೊಡುತ್ತಿದ್ದಾರೋ, ಇಲ್ವೋ ಅದೂ ಗೊತ್ತಿಲ್ಲ. ಆದರೆ ಸಚಿವರು ಪ್ರತೀ ನಿಮಿಷ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಕೊರೊನಾದಿಂದ ಜನರು ಭಯಭೀತರಾಗಿದ್ದು, ಜನರಲ್ಲಿ ಭಯ ಹೋಗಲಾಡಿಸುವ ಕೆಲಸ ಮಾಡಬೇಕು. ಮುಂಜಾಗೃತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.








