Siddaramaiah -Kolar
ಟಗರಿಗೆ ಮುನಿಯಪ್ಪ ಕೊಟ್ಟಿದ್ದು ಎಚ್ಚರಿಕೆನಾ..? ಸಲಹೆನಾ..?
ಕೋಲಾರ ಜಿಲ್ಲಾ ಕಾಂಗ್ರೆಸ್ ನಲ್ಲಿ ಇದ್ಯಾ ಮುಸುಕಿನ ಗುದ್ದಾಟ..?
ಲೋಕಸಮರಲ್ಲಿ ಮುನಿಯಪ್ಪ ಕೈ ಬಿಟ್ಟೋರು ಯಾರು..?
ಅಂದು ಕೈ ಕೊಟ್ಟವರು ಇಂದು ಹುಲಿಯಾ ಕೈ ಹಿಡಿತಾರಾ..?
ರಾಜ್ಯ ಕಾಂಗ್ರೆಸ್ ನ ಮಾಸ್ ಲೀಡರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ? ಬಾದಾಮಿಯಿಂದಲೇ ಸ್ಪರ್ಧಿಸುತ್ತಾರಾ..? ಅಥವಾ ಚಾಮರಾಜಪೇಟೆಗೆ ಬರ್ತಾರಾ ?
ಕೋಲಾರದಿಂದ ಕಣಕ್ಕಿಳಿಯುತ್ತಾರಾ..? ಇಲ್ಲಾ ಮತ್ತೆ ವರುಣಾ ಕ್ಷೇತ್ರದತ್ತ ವಾಲುತ್ತಾರಾ ? ಸದ್ಯ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿರುವ ಮಿಲಿಯನ್ ಡಾಲರ್ ಗಳ ಪ್ರಶ್ನೆಗಳಿವು..!!
ಹೌದು…! ವಿಪಕ್ಷ ನಾಯಕ ಸಿದ್ದರಾಮಯ್ಯ ಸದ್ಯ ಬಾದಾಮಿ ಕ್ಷೇತ್ರದ ಶಾಸಕರು. ಆದ್ರೆ ಅದೇ ಕ್ಷೇತ್ರದಿಂದ ಅವರು ಮತ್ತೆ ಸ್ಪರ್ಧಿಸೋದು ಅನುಮಾನ. ಯಾಕಂದರೆ ಸ್ವತಃ ಅವರೇ ಹೇಳಿಕೊಂಡಂತೆ ಬಾದಾಮಿ ಕ್ಷೇತ್ರ ಬೆಂಗಳೂರಿನಿಂದ ತುಂಬಾ ದೂರ ಇದೆ. ಹೀಗಾಗಿ ಬೆಂಗಳೂರಿಗೆ ಹತ್ತಿರ ಇರುವ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಅದರಂತೆ ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಇತ್ತೀಚೆಗಷ್ಟೆ ಕೋಲಾರಕ್ಕೆ ಭೇಟಿ ನೀಡಿ ನಗರದಲ್ಲಿ ರೌಂಡ್ಸ್ ಹಾಕಿದ್ರು. ಕೋಲಾರಕ್ಕೆ ಸಿದ್ದು ಬರುತ್ತಿದ್ದಂತೆ ಅವರ ಅಭಿಮಾನಿಗಳು ಕೂಡ ಭರ್ಜರಿಯಾಗಿ ಸ್ವಾಗತ ಕೋರಿದ್ರು, ಕಾರ್ಯಕರ್ತರ ರೆಸ್ಪಾನ್ಸ್ ನೋಡಿದ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು ಕೊಟ್ಟಂತೆ ಮಾತನಾಡಿದರು. ಇತ್ತ ಸಿದ್ದರಾಮಯ್ಯರನ್ನ ಕೋಲಾರಕ್ಕೆ ಕರೆತರಲೇಬೇಕು ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಶತ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಕೋಲಾರಕ್ಕೆ ಸಿದ್ದರಾಮಯ್ಯ ಬರುವ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ.
ಸಿದ್ದು ಕೋಲಾರಕ್ಕೆ ಬರ್ಲಿ.. ಆದ್ರೆ ಎಚ್ಚರವಿರಲಿ..!!
ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾತು ರಾಜ್ಯ ಕಾಂಗ್ರೆಸ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮತ್ತೊಂದು ಕಡೆ ಸಿದ್ದರಾಮಯ್ಯ ಕೋಲಾರಕ್ಕೆ ಬರೋದು ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪಗೆ ಇಷ್ಟವಿಲ್ಲ ಎಂಬ ಮಾತುಗಳು ಹರಿದಾಡುತ್ತಿವೆ. ಇದೇ ಕಾರಣಕ್ಕೆ ಸಿದ್ದು ಕೋಲಾರಕ್ಕೆ ಬಂದರೂ ಮುನಿಯಪ್ಪ ಅತ್ತ ಸುಳಿಯಲಿಲ್ಲ ಎಂದು ಹೇಳಲಾಗುತ್ತಿದೆ.
ಆದ್ರೆ ಇದೀಗ ಈ ವಿಚಾರದ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಕೆ.ಹೆಚ್ ಮುನಿಯಪ್ಪ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಕೋಲಾರಕ್ಕೆ ಬಂದಿದ್ದಾಗ ನಾನು ಗುಜರಾತ್ ನಲ್ಲಿದ್ದೆ. ಸಿದ್ದರಾಮಯ್ಯ ನನ್ನ ಜೊತೆ ಮಾತನಾಡಿದ್ದಾರೆ, ಸಿದ್ದರಾಮಯ್ಯ ಅವರನ್ನು ನಾನು ಸ್ವಾಗತ ಮಾಡುದ್ದೇನೆ. ಕೋಲಾರದಲ್ಲಿ ಸಿದ್ದರಾಮಯ್ಯ ಚುನಾವಣೆಗೆ ನಿಂತರೆ ಯಾವುದೇ ರಿಸ್ಕ್ ಇಲ್ಲ. ಒಟ್ಟಾಗಿ ಕೆಲಸ ಮಾಡಿದ್ರೆ ಗೆಲುವು ಖಚಿತ. ಆದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೆಸಲ ಮಾಡಿದವರು ಮುಂದಾಳತ್ವ ವಹಿಸಿದ್ದಾರೆ. ಹೀಗಾಗಿ ಯಾರಿಗೆ ವೋಟ್ ಹಾಕಬೇಕು ಎಂದು ಜನರಿಗೆ ಗೊಂದಲ ಆಗುತ್ತದೆ. ಮೂಲ ಕಾಂಗ್ರೆಸ್ಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲೆಕ್ಷನ್ ಗೆ ನಿಲ್ಲಬೇಕು, ಇಲ್ಲದೆ ಹೋದರೆ ಗೆಲುವು ಸುಲಭವಲ್ಲ. ಕೋಲಾರದಲ್ಲಿ ರಿಸ್ಕಿ ಇದೆ, ಆದ್ರೆ ಸಮಸ್ಯೆಯನ್ನು ಸರಿಪಡಿಸಿಕೊಂಡರೇ ಗೆಲುವು ಖಚಿತ ಎಂದಿದ್ದಾರೆ.
ಕೋಲಾರ ಜಿಲ್ಲಾ ಕಾಂಗ್ರೆಸ್ ನಲ್ಲಿ ಇದ್ಯಾ ಮುಸುಕಿನ ಗುದ್ದಾಟ..?
ಅಂದಹಾಗೆ ಕಾಂಗ್ರೆಸ್ ನ ಭದ್ರಕೋಟೆ ಕೋಲಾರ ಜಿಲ್ಲಾ ಕಾಂಗ್ರೆಸ್ ನಲ್ಲಿ ಸದ್ಯ ಗುಂಪುಗಾರಿಕೆ ತಾಂಡವಾಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್ ಮುನಿಯಪ್ಪ ವಿರುದ್ಧ ಮಾಜಿ ಸ್ಪೀಕಪ್ ರಮೇಶ್ ಕುಮಾರ್ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರ ಪ್ರಚಾರ ಮಾಡಿ ಸೋಲಿಸಿದ್ದರು. ಇದರಿಂದ ಜಿಲ್ಲೆಯ ಕೆಲವು ನಾಯಕರ ವಿರುದ್ಧ ಮುನಿಯಪ್ಪ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಪಕ್ಷದ ವೇದಿಕೆಯಲ್ಲೂ ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದಾರೆ.
ಆದ್ರೆ ಇಲ್ಲಿ ಗಮನಿಸಬೇಕಾದ ವಿಚಾರ ಏನಂದರೇ ಲೋಕ ಸಮರಲ್ಲಿ ಮುನಿಯಪ್ಪಗೆ ಖೆಡ್ಡಾ ತೋಡಿದ್ದ ನಾಯಕರೇ ಇಂದು ಸಿದ್ದರಾಮಯ್ಯ ಅವರನ್ನ ಕೋಲಾರಕ್ಕೆ ಕರೆತರಲು ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಕೋಲಾರ ಜಿಲ್ಲಾ ಕಾಂಗ್ರೆಸ್ ಸದ್ಯ ಗೊಂದಲಮಯವಾಗಿದ್ದು, ಮುನಿಯಪ್ಪ ಸಲಹೆಯನ್ನು ಸಿದ್ದರಾಮಯ್ಯ ಯಾವ ರೀತಿ ತೆಗೆದುಕೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.








