ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ ಗೊಂದಲಗಳು, ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತು ಆಂತರಿಕ ಸಂಘರ್ಷಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತಾತ್ಮಕ ಹಿಡಿತವನ್ನು ಮತ್ತೊಮ್ಮೆ ಸಾಬೀತುಪಡಿಸಲು ಮುಂದಾಗಿದ್ದಾರೆ. ಎಲ್ಲ ಊಹಾಪೋಹಗಳನ್ನು ಬದಿಗಿರಿಸಿ, ರಾಜ್ಯದ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ದಾಖಲೆಯ 17ನೇ ಬಜೆಟ್ ಮಂಡನೆಗೆ ಸರ್ವಸಿದ್ಧತೆಗಳನ್ನು ಆರಂಭಿಸಿದ್ದು, ಇದಕ್ಕಾಗಿ ಮಾರ್ಚ್ 6ರ ಮುಹೂರ್ತ ನಿಗದಿಯಾಗುವ ಸಾಧ್ಯತೆ ದಟ್ಟವಾಗಿದೆ.
ಕುರ್ಚಿ ಕದನಕ್ಕೆ ತಾತ್ಕಾಲಿಕ ವಿರಾಮ
ಕಳೆದ ಸೆಪ್ಟೆಂಬರ್ ತಿಂಲಿನಿಂದ ರಾಜ್ಯ ಕಾಂಗ್ರೆಸ್ ವಲಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿತ್ತು. ಸಂಕ್ರಾಂತಿ ಹಬ್ಬದ ನಂತರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಮತ್ತು ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದ್ದವು. ಡಿ.ಕೆ. ಶಿವಕುಮಾರ್ ಬಣದ ಶಾಸಕರು ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿ, ತಮ್ಮ ನಾಯಕನಿಗೆ ಅಧಿಕಾರ ನೀಡುವಂತೆ ಒತ್ತಡ ಹೇರಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಬಣವು ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪಟ್ಟು ಹಿಡಿದಿತ್ತು. ಈ ಅಧಿಕಾರ ಹಂಚಿಕೆಯ ಗೊಂದಲ ನಾಲ್ಕು ತಿಂಗಳಾದರೂ ತಾರ್ಕಿಕ ಅಂತ್ಯ ಕಂಡಿರಲಿಲ್ಲ.
ಹೈಕಮಾಂಡ್ ಸಂದೇಶದಿಂದ ಸಿಎಂ ನಿರಾಳ
ಈ ಗೊಂದಲದ ಪರಿಸ್ಥಿತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ಹೇಳಿಕೆ ನಿರ್ಣಾಯಕವಾಯಿತು. ರಾಜ್ಯದ ನಾಯಕತ್ವದ ಗೊಂದಲಗಳನ್ನು ಹೈಕಮಾಂಡ್ ಸೃಷ್ಟಿಸಿಲ್ಲ, ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕು ಎಂಬ ಖರ್ಗೆಯವರ ಖಡಕ್ ಸಂದೇಶವು ಡಿ.ಕೆ. ಶಿವಕುಮಾರ್ ಬಣದ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿದೆ. ಹೈಕಮಾಂಡ್ ನ ಈ ನಡೆ ಸಿದ್ದರಾಮಯ್ಯ ಅವರಿಗೆ ಆನೆಬಲ ತಂದಿದ್ದು, ಅವರು ಈಗ ಸಂಪೂರ್ಣ ನಿರಾಳರಾಗಿ ಆಡಳಿತದ ಕಡೆಗೆ ಗಮನ ಹರಿಸಲು ಆರಂಭಿಸಿದ್ದಾರೆ.
ಬಜೆಟ್ ಸಿದ್ಧತೆಗೆ ಅಧಿಕಾರಿಗಳಿಗೆ ಖಡಕ್ ಸೂಚನೆ
ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ ನಂತರ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಮೂಲಗಳ ಪ್ರಕಾರ ಮಾರ್ಚ್ 6ರಂದು ಶುಕ್ರವಾರ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಇದಕ್ಕಾಗಿ ಅವರು ಈಗಾಗಲೇ ಇಲಾಖಾವಾರು ಪೂರ್ವಭಾವಿ ಸಭೆಗಳಿಗೆ ಚಾಲನೆ ನೀಡಿದ್ದಾರೆ.
ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದ್ದು, ಕಳೆದ ಬಜೆಟ್ ನಲ್ಲಿ ಘೋಷಿಸಲಾದ ಯೋಜನೆಗಳ ಅನುಷ್ಠಾನದ ವರದಿ, ಬಾಕಿ ಉಳಿದಿರುವ ಕಾಮಗಾರಿಗಳು, ಮತ್ತು ಬಿಡುಗಡೆಯಾದ ಅನುದಾನದಲ್ಲಿ ಬಳಕೆಯಾದ ಹಾಗೂ ಉಳಿಕೆಯಾದ ಮೊತ್ತದ ಸಂಪೂರ್ಣ ಮಾಹಿತಿಯನ್ನು ಕಲೆಹಾಕಲು ಆದೇಶಿಸಿದ್ದಾರೆ. ಅಲ್ಲದೆ, ಮುಂದಿನ ಆರ್ಥಿಕ ವರ್ಷಕ್ಕೆ ಅಗತ್ಯವಿರುವ ಹೊಸ ಜನಪರ ಯೋಜನೆಗಳ ನೀಲನಕ್ಷೆಯನ್ನು ಸಿದ್ಧಪಡಿಸುವಂತೆಯೂ ತಾಕೀತು ಮಾಡಿದ್ದಾರೆ.
ಮುಂದಿನ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ಪಾಲಿಕೆಗಳು ಸೇರಿದಂತೆ ರಾಜ್ಯದ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಮುಂಬರುವ ಬಜೆಟ್ ನಲ್ಲಿ ನಗರ ಪ್ರದೇಶದ ಮತದಾರರನ್ನು ಸೆಳೆಯಲು ಹಾಗೂ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುವ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದು ಕೇವಲ ಅಂಕಿ-ಅಂಶಗಳ ಬಜೆಟ್ ಆಗಿರದೆ, ರಾಜಕೀಯವಾಗಿ ಮಹತ್ವದ ಬಜೆಟ್ ಆಗಿರಲಿದೆ.
ವಿಧಾನಮಂಡಲದ ಜಂಟಿ ಅಧಿವೇಶನವು ಮಾರ್ಚ್ 2ರಿಂದ ಆರಂಭವಾಗಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತದನಂತರ ನಾಲ್ಕು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್ 6ರಂದು ಸಿದ್ದರಾಮಯ್ಯನವರು ತಮ್ಮ ಬಜೆಟ್ ಭಾಷಣ ಆರಂಭಿಸಲಿದ್ದಾರೆ. ಈಗಾಗಲೇ 16 ಬಜೆಟ್ ಗಳನ್ನು ಮಂಡಿಸಿ ದಾಖಲೆ ಬರೆದಿರುವ ಸಿದ್ದರಾಮಯ್ಯ, 17ನೇ ಬಜೆಟ್ ಮಂಡಿಸುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಈ ಮೂಲಕ ತಮ್ಮ ವಿರೋಧಿಗಳಿಗೆ ತಾವು ಇನ್ನೂ ರಾಜಕೀಯವಾಗಿ ಸಕ್ರಿಯ ಮತ್ತು ಪ್ರಬಲ ಎಂಬುದನ್ನು ಸಾಬೀತುಪಡಿಸಲು ಅವರು ಸಜ್ಜಾಗಿದ್ದಾರೆ.








