Siddaramaiah | ಆರ್ ಎಸ್ ಎಸ್, ಹೆಚ್ ಡಿಕೆಗೆ ನನ್ನ ಕಂಡರೇ ಭಯ
ಕೊಪ್ಪಳ : ಆರ್ ಎಸ್ ಎಸ್ ಗೆ ಮತ್ತು ಹೆಚ್ ಡಿ ಕುಮಾರಸ್ವಾಮಿಗೆ ನನ್ನ ಕಂಡರೆ ಭಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೊಪ್ಪಳದ ಬಸಾಪೂರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆರ್ಎಸ್ಎಸ್ ಗೆ ನನ್ನ ಕಂಡರೆ ಭಯ, ಕುಮಾರಸ್ವಾಮಿಗೆ ನನ್ನ ಕಂಡರೆ ಭಯ. ಅದಕ್ಕೆ ಅವರು ನನ್ನ ಬಗ್ಗೆ ಪದೇ ಪದೇ ಮಾತಾಡುತ್ತಾರೆ. ಅವರಿಬ್ಬರಿಗೂ ನನ್ನ ಕಂಡರೆ ಭಯ ಅದಕ್ಕೆ ನನ್ನ ಟಾರ್ಗೆಟ್ ಮಾಡಿ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿ ಸಿಎಂ ಆಗ್ತಿನಿ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಜನ ಆಶೀರ್ವಾದ ಮಾಡಬೇಕು. ನಾವೇ ಹೋಗಿ ಕುಳಿಕೊಳ್ಳಲು ಆಗುತ್ತಾ..? ಶಿಕ್ಷಕರ ಚುನಾವಣೆಯಲ್ಲಿ ಜೆಡಿಎಸ್ ಯಾವ ಸ್ಥಾನದಲ್ಲಿದೆ..? ಅಂಥ ಪಾರ್ಟಿ ಅಧಿಕಾರಿಕ್ಕೆ ಬರುತ್ತಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರ ಬಂಡಾಯ ವಿಚಾರವಾಗಿ ಮಾತನಾಡಿ, ಮಹಾರಾಷ್ಟ್ರದಲ್ಲಿ ನಾವು ಅಧಿಕಾರ ಕಳೆದುಕೊಂಡಿಲ್ಲ. ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವಂತೆ ಬಿಜೆಪಿಗರು ಮಾಡುತ್ತಿದ್ದಾರೆ. ಆಪರೇಷನ್ ಕಮಲ ಮಾಡಿ ಮಹಾರಾಷ್ಟ್ರ ಸರ್ಕಾರ ಬೀಳಿಸುತ್ತಿದ್ದಾರೆ. ಬಿಜೆಪಿಗರು ಆಪರೇಷನ್ ಕಮಲ ಮಾಡ್ತಿರೋದು ಪ್ರಜಾಪ್ರಭುತ್ವಕ್ಕೆ ಮಾರಕ. ಇವರು ತುಂಬಾ ಪ್ರಜಾಪ್ರಭುತ್ವದ ಬಗ್ಗೆ ಮಾತಾಡ್ತಾರೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದರು, ಕಪ್ಪು ಚುಕ್ಕೆ ಅಂತಾರೆ. ಆದ್ರೆ, ಇವರು ಮಾಡ್ತಿರೋದು ಏನು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಮಧ್ಯಪ್ರದೇಶದ ಸರ್ಕಾರ ಕಿತ್ತು ಹಾಕಿದ್ದು ಯಾರು? ಕರ್ನಾಟಕದ ಸಮ್ಮಿಶ್ರ ಸರ್ಕಾರ ಕಿತ್ತಾಕಿದ್ದು ಯಾರು? ಪಾಪದ ಹಣ ಅವರ ಬಳಿ ಇದೆ,ಲೂಟಿ ಹೊಡೆದ ಹಣ ಇದೆ. ಒಬ್ಬೊಬ್ಬ ಶಾಕರಿಗೆ 25- 30 ಕೋಟಿ ಕೊಟ್ಟು ಖರೀದಿ ಮಾಡ್ತಿದ್ದಾರೆ. ಇದೆಲ್ಲ ಸುಳ್ಳು, ಶಾಸಕರೆಲ್ಲ ಸುಮ್ಮನೇ ಬರ್ತಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.








