ಬೆಳಗಾವಿ: ಸಿದ್ದರಾಮಯ್ಯ (CM Siddaramaiah) ಸಿಎಂ ಆಗಿ ಮುಂದುವರೆಯುತ್ತಾರೆ. ಸಿಎಂ ರೇಸ್ ನಲ್ಲಿ ಯಾರೂ ಇಲ್ಲ ಎಂದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದ್ದಾರೆ.
ದೀಪಾವಳಿ ನಂತರ ಕಾಂಗ್ರೆಸ್ (Congress) ಸರ್ಕಾರ ಪತನ ಆಗುತ್ತೆ ಎಂಬ ಬಿಜೆಪಿ (BJP) ನಾಯಕರ ಹೇಳಿಕೆ ವಿಚಾರಕ್ಕೆ ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ನಮ್ಮ ಸ್ಥಿರ ಸರ್ಕಾರ ಸಹಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ಹೀಗಾಗಿ ಹೇಗಾದರೂ ಮಾಡಿ ಸರ್ಕಾರ ಒಡೆಯುವ ಕಾರ್ಯ ಮಾಡಲು ಯತ್ನಿಸುತ್ತಿದೆ. ಕೇಂದ್ರ ಸರ್ಕಾರಕ್ಕೂ ಇದೇ ಕೆಲಸವಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಕುಮಾರಸ್ವಾಮಿ, ಜೊಲ್ಲೆ, ನಿರಾಣಿ ಮೇಲೆ ಇರುವ ಭ್ರಷ್ಟಾಚಾರದ ಕುರಿತ ಅರ್ಜಿ ರಾಜ್ಯಪಾಲರ ಕಚೇರಿಯಲ್ಲಿ ತಿಂಗಳುಗಟ್ಟಲೇ ಹಾಗೇ ಬಿದ್ದಿದೆ. ರಾಜ್ಯಪಾಲರು ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇವಾಗ ಸಿಎಂ ವಿರುದ್ಧ ಖಾಸಗಿ ದೂರು ಬಂದ ತಕ್ಷಣವೇ ನೋಟಿಸ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಭವಿಷ್ಯ ನಿರ್ಧರಿಸುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. ಸಿಎಂ ರೇಸ್‌ನಲ್ಲಿ ಯಾರು ಇಲ್ಲ ಎಂದು ಸಮರ್ಥಿಸಿಕೊಂಡರು.
ಕೋರ್ಟಿನಲ್ಲಿ ಯಾವುದೇ ರೀತಿ ವ್ಯತಿರಿಕ್ತವಾದ ತೀರ್ಮಾನ ಬರುವುದಿಲ್ಲ. ರಾಜ್ಯಪಾಲರು ತನಿಖೆಗೆ ಕೊಟ್ಟಿರುವುದು ಸರಿಯೋ ಇಲ್ಲವೋ ಅಷ್ಟೇ ಇರೋದು. ಅವರು ತಪ್ಪು ಮಾಡಿದ್ದಾರೆ ಎನ್ನುವುದು ಇಲ್ಲ. ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಅಧಿಕಾರದ ದುರುಪಯೋಗವು ಮಾಡಿಲ್ಲ ಎಂದು ಹೇಳಿದ್ದಾರೆ.








