Siddaramaiah | 4 ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದು ಬಿಜೆಪಿ ಸಾಧನೆ
ಬೆಂಗಳೂರು : ಕೇವಲ 4 ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದು ಬಿಜೆಪಿ ಸಾಧನೆ ಅಲ್ಲವೇ ಸಿ.ಟಿ.ರವಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಲ ಜಾಸ್ತಿಯಾಗಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ…
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಲ ಜಾಸ್ತಿಯಾಗಿದೆ ಎಂದು ಸಿ.ಟಿ.ರವಿ ಹೇಳುತ್ತಿದ್ದರು. ನಮ್ಮ ಸರ್ಕಾರದ ಕೊನೆ ಬಜೆಟ್ ಮಂಡಿಸಿದಾಗ ರಾಜ್ಯದ ಮೇಲಿದ್ದ ಒಟ್ಟು ಸಾಲ 2.4 ಲಕ್ಷ ಕೋಟಿ. ನಾನು ಅಧಿಕಾರಕ್ಕೆ ಬರುವ ಮೊದಲು ಈ ಸಾಲ 1.36 ಲಕ್ಷ ಕೋಟಿ ಇತ್ತು.
ನಮ್ಮನ್ನು ಸಾಲ ಮಾಡಿ ತುಪ್ಪ ತಿನ್ನುವವರು ಎಂದು ಟೀಕಿಸುತ್ತಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಸಾಲ 5 ಲಕ್ಷದ 40 ಸಾವಿರ ಕೋಟಿಗೆ ಏರಿದೆ. ಕೇವಲ 4 ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದು ಬಿಜೆಪಿ ಸಾಧನೆ ಅಲ್ಲವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಅಲ್ಲದೇ ನಮ್ಮ ಅವಧಿಯಲ್ಲಿ ಸಾಲವು ರಾಜ್ಯದ ಜಿಡಿಪಿ ಯ 25% ಒಳಗಡೆ ಇತ್ತು, ಫಿಸ್ಕಲ್ ಢಿಫಿಸಿಟ್ 3% ಒಳಗಡೆ ಇತ್ತು ಹಾಗೂ ರಾಜಸ್ವ ಉಳಿಕೆ ಇತ್ತು. ಆದರೆ ಈ ವರ್ಷ 19,000 ಕೋಟಿ ವಿತ್ತೀಯ ಕೊರತೆ ಎದುರಿಸುತ್ತಿದ್ದೇವೆ. ಬಿಜೆಪಿ ನಾಯಕರು ಸಾಲ ಮಾಡಿ ಸಂಬಳ ಕೊಡುವಷ್ಟು ರಾಜ್ಯವನ್ನು ದಿವಾಳಿಯೆಬ್ಬಿಸಿದ್ದಾರೆ.
ಈ ವರ್ಷ ಸರ್ಕಾರವು ಅಸಲು ಮತ್ತು ಬಡ್ಡಿ ಸೇರಿ ಒಟ್ಟು 43,000 ಕೋಟಿ ಸಾಲದ ಮರುಪಾವತಿ ಮಾಡಬೇಕು. ನಾಚಿಕೆಗೆಟ್ಟ ಬಿಜೆಪಿ ನಾಯಕರು ಈ ಸಾಲದ ಹಣದಲ್ಲೂ 40% ಕಮಿಷನ್ ಹೊಡೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.