ಅವರಪ್ಪ ಸೋತಿಲ್ವಾ, ಮಗ ಸೋತಿಲ್ವಾ, ಅಣ್ಣ ಸೋತಿಲ್ವಾ?
ಬೆಂಗಳೂರು : ಅವರಪ್ಪ ಸೋತಿಲ್ವಾ, ಮಗ ಸೋತಿಲ್ವಾ, ಅಣ್ಣ ಸೋತಿಲ್ವಾ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ತುಕುಮೂರಿನಿಂದ ಜೆಡಿಎಸ್ʼನ್ನು ಓಡಿಸಿ ಅನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ? ಅಥವಾ ಕಾಂಗ್ರೆಸ್ʼನ ಪಿತ್ರಾರ್ಜಿತ ಆಸ್ತಿಯಾ? ಚಾಮುಂಡೇಶ್ವರಿ ಕ್ಷೇತ್ರದಿಂದ ನಿಮ್ಮನ್ನು ಜನರು ಓಡಿಸಿದ್ದು ಮರೆತುಬಿಟ್ಟಿರಾ? ಈ ಸಲ ಬಾದಾಮಿ ಕ್ಷೇತ್ರದಿಂದಲೂ ಓಡಬೇಕಾಗುತ್ತದೆ, ಕಾಯಿರಿ ಎಂದು ಹೆಚ್ ಡಿ ಕುಮಾರಸ್ವಾಮಿ ಏಕವಚನ ಭಾಷೆ ಬಳಿಸಿ ಟ್ವೀಟ್ ಮಾಡಿದ್ದರು.
ಇದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಎಲೆಕ್ಷನ್ ಗಳಲ್ಲಿ ಸೋಲು ಗೆಲುವು ನಿರ್ಧಾರ ಮಾಡೋದು ಮತದಾರರು, ಅವರ ತೀರ್ಪನ್ನ ನಾವು ಸ್ವೀಕಾರ ಮಾಡಬೇಕು. ನಾನು ಸೋತಿದ್ದೇನೆ. ಅವರಪ್ಪ ಸೋತಿಲ್ವಾ, ಮಗ ಸೋತಿಲ್ವಾ, ಅಣ್ಣ ಸೋತಿಲ್ವಾ? ಎಂದು ತಿರುಗೇಟು ನೀಡಿದರು.
ಇನ್ನು ಜೆಡಿಎಸ್ ನಲ್ಲಿ ನಾನು ರಾಜ್ಯಾಧ್ಯಕ್ಷ ಆಗಿದ್ದಾಗ ಈ ಕುಮಾರಸ್ವಾಮಿ ಎಲ್ಲಿದ್ರು ಅಂತಾನೇ ಗೊತ್ತಿಲ್ಲ. ನಾನೇಕೆ ಇವರ ಮುಂದೆ ಹೋಗಿ ಕೈಕಟ್ಟಿ ನಿಲ್ಲಲಿ, ಕಣ್ಣೀರು ಹಾಕಲಿ ಎಂದು ಸಿದ್ದರಾಮಯ್ಯ ಗುಡುಗಿದರು.