ಬೆಂಗಳೂರು : ಲಾಕ್ ಡೌನ್ ನಿಂದಾಗಿ ಬಂದ್ ಆಗಿರುವ ಶಾಲೆಗಳನ್ನು ಪ್ರಾರಂಭಿಸುವ ಕುರಿತು ಸಾಕಷ್ಟು ಗೊಂದಲು ಸೃಷ್ಟಿಯಾಗಿವೆ. ಒಂದೆಡೆ ಶಿಕ್ಷಣ ಸಚಿವರು ಪಾಲಕರ ಜೊತೆ ಸಭೆ ನಡೆಸಿದ ಬಳಿಕ ಸಭೆಯಲ್ಲಿ ಬಂದ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ಕಳಿಸುತ್ತೇವೆ. ಕೇಂದ್ರ ಸರ್ಕಾರ ದಿಂದ ಮಾರ್ಗಸೂಚಿ ಬಂದ ಮೇಲೆ ಶಾಲೆಗಳನ್ನು ಪ್ರಾರಂಭಿಸುವ ದಿನಾಂಕ ತಿಳಿಸುತ್ತೇವೆ ಎಂದು ಹೇಳಿದ್ದರು. ಮತ್ತೊಂದೆಡೆ ರಾಜ್ಯದಲ್ಲಿ ಜುಲೈನಿಂದಾಗಿ ಶಾಲೆಗಳು ಪ್ರಾರಂಭ ಮಾಡಲಾಗುವುದು ಎಂಬ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದೆ ಇದೆ. ಹಾಗಾಗಿ ಶಾಲೆಗಳನ್ನು ಪ್ರಾರಂಭಿಸುವ ವಿಚಾರ ಗೊಂದಲಗಳಿಂದ ಕೂಡಿದೆ.
ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಶಾಲೆಗಳನ್ನು ಯಾವಗ ಪ್ರಾರಂಭ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಶಾಲೆಗಳನ್ನು ಜುಲೈ ತಿಂಗಳಲ್ಲಿ ಪುನರಾರಂಭಿಸುವ ಪ್ರಸ್ತಾವವನ್ನು ಸುರೇಶ್ ಕುಮಾರ್ ಸರ್ಕಾರದ ಮುಂದಿಟ್ಟಿದ್ದಾರೆ. ಇದರಿಂದ ಆತಂಕಕ್ಕೀಡಾಗಿರುವ ಪೋಷಕರು ಪ್ರಸ್ತಾವವನ್ನು ವಿರೋಧಿಸುತ್ತಿರುವುದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಗಮನಿಸಬೇಕು. ಅಲ್ಲದೆ ಬ್ರಿಟನ್, ಫ್ರಾನ್ಸ್, ಇಟಲಿ ಸೇರಿದಂತೆ ಬೇರೆ ದೇಶಗಳಲ್ಲಿ ಶಾಲೆಗಳನ್ನು ಪುನರಾರಂಭಿಸಿದ ನಂತರ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗಲಿರುವುದು ವರದಿಯಾಗುತ್ತಿವೆ. ಹಾಗಾಗಿ ಎರಡು ತಿಂಗಳ ನಂತರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಶಾಲೆಗಳ ಪುನರಾರಂಭದ ಬಗ್ಗೆ ಯೋಚನೆ ಮಾಡುವುದು ಸೂಕ್ತ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.








