ಸಾಕ್ಷ್ಯವಿಲ್ಲದೇ ಆರೋಪ ಮಾಡುವುದೇ ಸಿದ್ದರಾಮಯ್ಯರ ರಾಜಕೀಯ : ಬಿಜೆಪಿ
ಬೆಂಗಳೂರು : ಸಾಕ್ಷ್ಯವಿಲ್ಲದೇ ಆರೋಪ ಮಾಡುವುದೇ ಸಿದ್ದರಾಮಯ್ಯ ಇದುವರೆಗೆ ಮಾಡಿಕೊಂಡು ಬಂದಿರುವ ರಾಜಕೀಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭಯೋತ್ಪಾದಕ ಎಂದು ಟೀಕಿಸಿದ್ದರು.
ಸಿದ್ದರಾಮಯ್ಯರ ಈ ಹೇಳಿಕೆಗೆ ಇಂದು ಟ್ವಿಟ್ಟರ್ ನಲ್ಲಿ ಬಿಜೆಪಿ ಕಿಡಿಕಾರಿದೆ.
ಮಾನ್ಯ ಸಿದ್ದರಾಮಯ್ಯ ಅವರೇ, ನೀವು ಮಾತ್ರ ಯಾರಿಗೆ ಏನು ಬೇಕಾದರೂ ಹೇಳಿ ನಿಂದಿಸಬಹುದೇ? ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರನ್ನು ನೀವು ಭಯೋತ್ಪಾದಕ ಎಂದು ಆರೋಪಿಸಿದ್ದೀರಿ. ಎಲ್ಲರೂ ಇದೇ ದಾಟಿಯಲ್ಲಿ ಉತ್ತರ ನೀಡಿದರೆ ನೀವು ಸಹಿಸುತ್ತೀರಾ ಎಂದು ಬಿಜೆಪಿ ಪ್ರಶ್ನಿಸಿದೆ.
ಸತ್ಯ ಕಟುವಾಗಿಯೇ ಇರುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರು ಸತ್ಯ ಹೇಳಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಭಯೋತ್ಪಾದಕ ಕೃತ್ಯಗಳು ಅಂಕೆಗೆ ಮೀರಿ ಘಟಿಸಿದ್ದು ಸುಳ್ಳೇ? ದೇಶಾದ್ಯಂತ ಉಗ್ರ ಕೃತ್ಯ ನಡೆದಾಗ ಕಾಂಗ್ರೆಸ್ ಅದಕ್ಕೆ ಪ್ರತಿರೋಧ ನೀಡದೇ ಸೋತದ್ದು ಸುಳ್ಳೇ? ಮುಂಬೈ ದಾಳಿ ಆದಾಗ ಪಾರ್ಟಿ ಮಾಡುತ್ತಿದ್ದವರು ಯಾರು?
ಸಾಕ್ಷ್ಯವಿಲ್ಲದೇ ಆರೋಪ ಮಾಡುವುದೇ ಸಿದ್ದರಾಮಯ್ಯ ಇದುವರೆಗೆ ಮಾಡಿಕೊಂಡು ಬಂದಿರುವ ರಾಜಕೀಯ. ಜನರ ಲಕ್ಷ್ಯ ಬೇರೆಡೆ ಸೆಳೆಯುವ ತಂತ್ರಗಾರಿಕೆಯಿದು. ಆದರೆ ಎಷ್ಟೋ ಸಂದರ್ಭದಲ್ಲಿ ಅವರು ಮಾಡಿದ ಆರೋಪಗಳಿಗೆ ಸಾಕ್ಷಿ ಅವರ ಮನೆಯ ಎದುರು ಬಂದು ನಿಂತಿರುತ್ತವೆ. ಉದಾಹರಣೆ ನೀಡಬೇಕೇ?
ದೇಶದ ಆಂತರಿಕ ಭದ್ರತೆ ವಿಚಾರ ಬಂದಾಗ ಕಾಂಗ್ರೆಸ್ ಪಕ್ಷ ಸದಾ ಇಬ್ಬಗೆಯ ನಿಲುವು ಪ್ರದರ್ಶಿಸುತ್ತದೆ. ಭಯೋತ್ಪಾದಕರ ದಾಳಿಯಾದಾಗಲೂ ಶಾಂತಿ ಮಂತ್ರ ಜಪಿಸುವ ನೀವು ನಗರ ನಕ್ಸಲರಿಗೆ ರಾಜ ಸನ್ಮಾನ ಕೊಡುವುದು ಸುಳ್ಳೇ? ಈ ಕಾರಣಕ್ಕಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದು ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.









