ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಾಡಿದ ಪಾಪ ಅವರನ್ನು ಸುಮ್ಮನೆ ಬಿಡುವುದಿಲ್ಲ. ಸದ್ಯದಲ್ಲಿಯೇ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದ ಜಗನ್ನಾಥ ಭವನದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇಡೀ ರಾಜ್ಯವೇ ಈ ಸರ್ಕಾರಕ್ಕೆ ಶಾಪ ಹಾಕುತ್ತಿದೆ. ಅಧಿಕಾರದಲ್ಲಿರುವ ಪಕ್ಷ ಜನವಿರೋಧಿ ಹಾದಿ ಹಿಡಿದಾಗ ಎಚ್ಚರಿಸುವ ಕಾರ್ಯವನ್ನು ವಿರೋಧ ಪಕ್ಷ ಮಾಡಬೇಕಾಗುತ್ತದೆ. ಹೀಗಾಗಿ ನಾವು ಈ ಸರ್ಕಾರದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ದುಷ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿರುದ್ಧ ಹೋರಾಟಗಳು ನಡೆದಿವೆ. ಈ ಸರ್ಕಾರದ ಬಂದ ದಿನದಿಂದ ಅಭಿವೃದ್ಧಿ ಕಾರ್ಯಗಳೇ ಆರಂಭವಾಗಿಲ್ಲ. ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದು, ಚುನಾವಣೆ ಸಂದರ್ಭದಲ್ಲಿ ಹಣ ಹಾಕಿದರು. ಈಗ ಜಿಪಂ, ತಾಪಂ ಚುನಾವಣೆ ಬಂದಾಗ ಹಣ ಬಿಡುಗಡೆಯಾಗಲಿದೆ ಎಂದು ಆರೋಪಿಸಿದ್ದಾರೆ.
ಉಚಿತ ಬಸ್ ಪ್ರಯಾಣದಿಂದ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಉಚಿತ ಬಸ್ ಪ್ರಯಾಣದ ಹೆಸರಿನಲ್ಲಿ ಮಹಿಳೆಯರ ಮೂಗಿಗೆ ತುಪ್ಪ ಹಚ್ಚಿದ್ದಾರೆ. ಪಾದಯಾತ್ರೆ ಹೋರಾಟ ಎಂದರೆ ಯಡಿಯೂರಪ್ಪ ಅವರು ನೆನಪಾಗುತ್ತಾರೆ. ಕರ್ನಾಟಕದಲ್ಲಿ ಹೋರಾಟ ಎಂದೊಡನೆ ಯಡಿಯೂರಪ್ಪ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಈ ಪಕ್ಷದ ವಿರುದ್ಧ ಲಕ್ಷ ಲಕ್ಷ ಜನರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲ ವರ್ಗದ ಸಾಮಾನ್ಯ ಜನರು ಕೂಡ ಈ ಜನ ವಿರೋಧಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದರು ಎಂದು ಹೇಳಿದ್ದಾರೆ.








