ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಾಮಗ್ರಿ ಖರೀದಿಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದ್ದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೊರೊನಾ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದ ಪ್ರತಿ ಪೈಸೆ ಪೈಸೆ ಲೆಕ್ಕವನ್ನೂ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 3 ಪತ್ರ ಬರೆದಿದ್ದ ಸಿದ್ದರಾಮಯ್ಯ, ಕೊರೊನಾ ಸಾಮಗ್ರಿ ಖರೀದಿಯ ಲೆಕ್ಕವನ್ನು ಕೇಳಿದ್ದರು. ಮುಖ್ಯಮಂತ್ರಿಗಳಿಂದ ಉತ್ತರ ಬಾರದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಅವರಿಗೆ ಪತ್ರ ಬರೆದು ವಿವರ ಕೇಳಿದ್ದಾರೆ.
ನಾನು ಬರೆದ ಪತ್ರಗಳಿಗೆ ರಾಜ್ಯ ಸರ್ಕಾರ ಸಮರ್ಪಕ ಉತ್ತರ ನೀಡುತ್ತಿಲ್ಲ. ಸರ್ಕಾರದ ಈ ವರ್ತನೆ ವಿರೋಧ ಪಕ್ಷದ ನಾಯಕರಿಗೆ ಮಾಡುತ್ತಿರುವ ಹಕ್ಕುಚ್ಯುತಿಯಾಗಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಪತ್ರ ತಲುಪಿದ ಮೂರು ದಿನಗಳಲ್ಲಿ ಮಾಹಿತಿ ನೀಡಬೇಕು. ಎಲ್ಲಾ ಮಾಹಿತಿಗಳನ್ನು ಜುಲೈ 16ರ ಸಂಜೆ 5 ಗಂಟೆಯೊಳಗೆ ನೀಡಬೇಕು ಎಂದು ಸಿದ್ದರಾಮಯ್ಯ ಡೆಡ್‍ಲೈನ್ ನೀಡಿದ್ದಾರೆ.
ಸಿದ್ದರಾಮಯ್ಯ ಬರೆದ ಪತ್ರದ ಸಾರಾಂಶ
1. ಎಷ್ಟು ಇಲಾಖೆಗಳು ಕೊರೊನಾ ಸಾಮಗ್ರಿ ಖರೀದಿಸಿವೆ? ಎಷ್ಟು ಹಣ ನೀಡಲಾಗಿದೆ
2. ಬಿಡ್‍ನಲ್ಲಿ ಭಾಗವಹಿಸಿದ ಸಂಸ್ಥೆಗಳೆಷ್ಟು..? ಯಾವ ಕಂಪನಿಗೆ ಬಿಡ್ ನೀಡಲಾಗಿದೆ..?
3. ಹೆಚ್ಚಿನ ದರ ಕೋಟ್ ಮಾಡಿದ ಕಂಪನಿಗೆ ಸರಬರಾಜು ಆದೇಶ ನೀಡಿರುವ ಪ್ರಕರಣಗಳೆಷ್ಟು ? ಕಾರಣವೇನು
4. ಕೇಂದ್ರ ಸರ್ಕಾರವು ಸರಬರಾಜು ಮಾಡಿದ ಸಾಮಗ್ರಿಗಳು ಕಳಪೆಯಾಗಿವೆ ಎಂದು ಬಂದ ದೂರುಗಳು ಎಷ್ಟು ? ಕೈಗೊಂಡ ಕ್ರಮಗಳೇನು ?
5. ಆಹಾರ, ಆಹಾರ ಧಾನ್ಯಗಳ ಕಿಟ್ ಕಿಟ್, ಹಾಲನ್ನು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ. ಆಹಾರ ತಯಾರಿಸಿದ ಸಂಸ್ಥೆಗೆ ಬಿಡುಗಡೆ ಮಾಡಿರುವ ಹಣವೆಷ್ಟು..?
6. ಪ್ರತಿ ಕ್ವಾರಂಟೈನ್ ಕೇಂದ್ರಕ್ಕೆ ಇದುವರೆಗೆ ಮಾಡಿರುವ ಖರ್ಚು ಎಷ್ಟು..? ಎಷ್ಟು ಕ್ವಾರಂಟೈನ್ ಕೇಂದ್ರಗಳನ್ನು ರಾಜ್ಯ ಸರ್ಕಾರ ನಿರ್ವಹಿಸಿದೆ ಎಂಬುದರ ವಿವರ ನೀಡುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ