ಪೋಸ್ಟ್ ಕಾರ್ಡ್ ನ್ಯೂಸ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ, ವಂದೇ ಮಾತರಂ ಕೇಳಲೂ ಕೂಡ ಯೋಗ್ಯಳಲ್ಲ ಎಂದು ಕಿಡಿಕಾರಿದ್ದಾರೆ.

ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಅಮೂಲ್ಯ ಈ ಹಿಂದೆ ವಿಮಾನ ನಿಲ್ದಾಣದಲ್ಲಿ ಮಹೇಶ್ ವಿಕ್ರಮ್ ಹೆಗ್ಡೆ ಅವರಿಗೆ ವಂದೇ ಮಾತರಂ ಗೀತೆ ಹಾಡಿ ಎಂದು ಪೀಡಿಸಿ ಸುದ್ದಿಯಾಗಿದ್ದರು.
ಈ ಕುರಿತಂತೆ ಟ್ವೀಟ್ ಮಾಡಿರುವ ಮಹೇಶ್ ವಿಕ್ರಮ್ ಹೆಗ್ಡೆ, ‘ಯಾವ ಕಾರಣಕ್ಕೆ ನಾನು ಅಂದು ವಿಮಾನ ನಿಲ್ದಾಣದಲ್ಲಿ ಮೌನವಹಿಸಿದ್ದೆ ಎಂಬುವುದು ಇಂದು ಸಾಬೀತಾಗಿದೆ. ಇಂತಹವರು ವಂದೇ ಮಾತರಂ ಗೀತೆ ಕೇಳಲೂ ಕೂಡ ಯೋಗ್ಯರಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಗಿಮಿಕ್ ಗಳನ್ನು ಮಾಡುತ್ತಾರೆ. ಪೊಲೀಸರು ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಕ್ರೂರವಾಗಿ ಶಿಕ್ಷಿಸಬೇಕು. ಪಾಕಿಸ್ತಾನದ ಪಾ ಅಕ್ಷರವನ್ನೂ ಕೂಡ ಉಚ್ಚರಿಸಲು ಅವರು ಇನ್ನು ಮುಂದೆ ಭಯಪಡಬೇಕು. ಈ ಟ್ರೆಂಡ್ ಇಲ್ಲಿಗೆ ಕೊನೆಯಾಗಬೇಕು’ ಎಂದು ಬರೆದಿದ್ದಾರೆ.
ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ, ಕವಿತಾ ರೆಡ್ಡಿ ಹಾಗೂ ನಜ್ಮಾ ನಜೀರ್ ಎಂಬ ವಿದ್ಯಾರ್ಥಿನಿಯರ ಜೊತೆಗೂಡಿ ಪೋಸ್ಟ್‌ಕಾರ್ಡ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನು ವಂದೇ ಮಾತರಂ ಹಾಡಿ, ನಿಮ್ಮ ದೇಶಪ್ರೇಮ ಸಾಬೀತು ಪಡಿಸಿ ಎಂದು ಪೀಡಿಸಿದ್ದರು. ಆದರೆ ಮಹೇಶ್ ವಿಕ್ರಮ್ ಹೆಗ್ಡೆ ಅವರಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಹೋಗದೆ ಮೌನ ವಹಿಸಿದ್ದರು.








