ತಾನು ಪೊಲೀಸ್ ಎಂದು ಹೇಳಿಕೊಂಡು ಸಿಲಿಕಾನ್ ಸಿಟಿ ಪ್ರೇಮಿಗಳನ್ನು ಹೆದರಿಸಿ, ಬೆದರಿಸಿ ಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸ್‍ನನ್ನು ಬೆಂಗಳೂರಿನ ಅಸಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನರೇಶ್ ಅಲಿಯಾಸ್ ಗುರು ನರೇಶ್ ಬಂಧಿತ ಆರೋಪಿ. ಹೆಬ್ಬಾಳದಿಂದ ಏರ್ ಪೋರ್ಟ್ ರಸ್ತೆಯಲ್ಲಿ ತಡರಾತ್ರಿ ಪೊಲೀಸ್ ರೀತಿ ಪೋಸ್‍ಕೊಟ್ಟು ಜನರ ಬಳಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ನರೇಶ್ ವೀಕೆಂಡ್ ಮತ್ತು ಲೇಟ್ ನೈಟ್ ನಲ್ಲಿ ಜಾಲಿರೈಡ್ ಮಾಡುತ್ತಿದ್ದ ಪ್ರೇಮಿಗಳನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ. ತಾನು ಪೊಲೀಸ್ ಅಧಿಕಾರಿ ಎಂದು ಪ್ರೇಮಿಗಳನ್ನು ಬೆದರಿಸಿ ವಾಹನದ ದಾಖಲಾತಿ ಕೇಳಿ ಠಾಣೆಗೆ ನಡೆಯಿರಿ ಎಂದು ಹೆದರಿಸುತ್ತಿದ್ದ. ಥೆಟ್ ಪೊಲೀಸರಂತೆ ವರ್ತಿಸುತ್ತಿದ್ದ ನರೇಶ್‍ನನ್ನ ಕಂಡ ಪ್ರೇಮಿಗಳು ಹೆದರಿ ಪೊಲೀಸರ ಸಹವಾಸ ಯಾಕಪ್ಪ ಅಂತ ಜೇಬಲ್ಲಿದ್ದಷ್ಟು ಹಣಕೊಟ್ಟು ಹೋಗುತ್ತಿದ್ದರು. ಈ ಪ್ರೇಮಿಗಳ ವೀಕ್‍ನೆಸ್ ಗುರುತಿಸಿಕೊಂಡಿದ್ದ ನಕಲಿ ನರೇಶ, ಏರ್ ಪೋರ್ಟ್ ರಸ್ತೆ ಬಳಿ ನಿಂತು ತನ್ನ ನಕಲಿ ಅವಾತರತಾಳಿ ವಂಚನೆ ಮಾಡುತ್ತಿದ್ದ.
ಹೀಗೆ ನಕಲಿ ಪೊಲೀಸ್ ನರೇಶನ ಗಮನಿಸಿದ ಹೆಬ್ಬಾಳದ ಅಸಲಿ ಪೊಲೀಸರು ಈತನನ್ನ ಹಿಡಿದು ವಿಚಾರಣೆ ಮಾಡಿದ್ದಾರೆ. ಈ ವೇಳೆ ನಾನು ಅಸಲಿಯಲ್ಲ ನಕಲಿ ಎಂದು ಪೊಲೀಸರ ಲಾಠಿ ಎದುರು ಬಾಯ್ಬಿಟ್ಟಿದ್ದಾನೆ. ನರೇಶನ ನಕಲಿ ಪುರಾಣ ತಿಳಿದುಕೊಂಡ ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿ ಕಂಬಿ ಹಿಂದೆ ನಿಲ್ಲಿಸಿ ವಿಚಾರಣೆ ಮುಂದುವರೆಸಿದ್ದಾರೆ.








