ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಹೇಳುತ್ತಾ ಚಂದನವನದಲ್ಲಿ ಭರವಸೆಯ ನಟರಾಗಿ ಬೆಳೆದು, ಉಳಿದವರು ಕಂಡಂತೆ ಕಿರಿಕ್ ಪಾರ್ಟಿ ಮಾಡಿ ಅವನೇ ಶ್ರೀಮನ್ನಾರಾಯಣ ಎಂದು ದೇಶದ ಮಟ್ಟದಲ್ಲಿ ಗುರುತಿಸಿಕೊಂಡ ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 37ನೇ ವಸಂತಕ್ಕೆ ಕಾಲಿಟ್ಟಿರುವ ರಕ್ಷಿತ್ ಶೆಟ್ಟಿ ಕುಟುಂಬದವರ ಜೊತೆ ಸರಳವಾಗಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಜಲ್ಲಿ ವೈರಲ್ ಆಗಿದೆ.
ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ ಮತ್ತು ಯುವ ನಿರ್ದೇಶಕ. ಇವರು 6 ಜೂನ್ 1983 ರಂದು ಉಡುಪಿಯಲ್ಲಿ ಜನಿಸಿದರು. ಇವರು ಎನ್.ಎಮ್.ಎ.ಎಮ್.ತಾಂತ್ರಿಕ ಮಹಾವಿದ್ಯಾಲಯದಿಂದ ಇಂಜಿನೀಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಚಿತ್ರರಂಗಕ್ಕೂ ಬರುವ ಮುನ್ನ ಎರಡು ವರ್ಷ ಸಾಫ್ಟವೇರ್ ಉದ್ಯೋಗಿಯಾಗಿ ಕೆಲಸ ಮಾಡಿದ್ದರು.
2010 ರಲ್ಲಿ ತೆರೆಕಂಡ `ನಮ್ ಏರಿಯಾದಲ್ಲೊಂದು ದಿನ’ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ರಕ್ಷಿತ್ ಗೆ ಬ್ರೇಕ್ ನೀಡಿದ ಚಿತ್ರ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ . ಕಡಿಮೆ ಬಜೆಟ್ಟಿನಿಲ್ಲಿ ಉತ್ತಮ ಕತೆಯೊಂದಿಗೆ ತಯಾರಾದ ಈ ಚಿತ್ರ ರಕ್ಷಿತ್ ಸಿನಿಜೀವನಕ್ಕೆ ಉತ್ತಮ ಅಡಿಪಾಯ ಹಾಕಿತು. ಈ ಸಿನಿಮಾ ಎಷ್ಟರ ಮಟ್ಟಿಗೆ ಹಿಟ್ ಆಯ್ತು ಅಂದ್ರೆ ಪಡ್ಡೆ ಹುಡುಗರು ಈ ಚಿತ್ರದ ಡೈಲಾಗ್ ಗಳಿಗೆ ಫಿದಾ ಆಗಿಬಿಟ್ಟಿದ್ದರು. ನಂತರ ರಕ್ಷಿತ್ ಶೆಟ್ಟಿ `ಉಳಿದವರು ಕಂಡಂತೆ ಚಿತ್ರದ ಮೂಲಕ ನಿರ್ದೇಶಕರಾದರು. ಇದುವರೆಗೆ ಕೇವಲ ಎಂಟು ಚಿತ್ರಗಳಲ್ಲಿ ನಟಿಸಿದ್ದರೂ ತಮ್ಮ ವಿಶಿಷ್ಟ ಚಿತ್ರಗಳ ಮೂಲಕ ರಕ್ಷಿತ್ ಕನ್ನಡದ ಭರವಸೆಯ ನಟ ಮತ್ತು ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.
ನಿರ್ಮಾಪಕನಾಗಿಯೂ ಸಕ್ರಿಯವಾಗಿರುವ ರಕ್ಷಿತ್ `ಕಿರಿಕ್ ಪಾರ್ಟಿ’, `ಹಂಬಲ್ ಪೊಲಿಟಿಶನ್ ನೊಗರಾಜ್’,`777 ಚಾರ್ಲಿ’ ಚಿತ್ರಗಳನ್ನು ನಿರ್ಮಿಸಿದ್ದಾರೆ. ತಮ್ಮ ಕಿರಿಕ್ ಪಾರ್ಟಿ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಜೊತೆ 2017 ಜುಲೈ 3 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಈ ಜೋಡಿ ಬೇರ್ಪಟ್ಟಿತು.
ಸದ್ಯ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸುತ್ತಿದ್ದಾರೆ.








