ಗಾನ ಗಾರುಡಿ ಎಸ್ ಪಿ ಬಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಗೆ ಇಡೀ ಸಂಗೀತ ಲೋಕವೇ ಕಂಬನಿ ಮಿಡಿದಿದೆ. ಅನೇಕ ಖ್ಯಾತ ಗಾಯಕರು ಎಸ್ ಪಿಬಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಗಾಯಕ ರಾಜೇಶ್ ಕೃಷ್ಣನ್
ಎಸ್ಪಿ ಬಾಲಸುಬ್ರಮಣ್ಯಂ ಅವರ ಗರಡಿಯಲ್ಲಿ ಪಳಗಿದ ಗಾಯಕ ರಾಜೇಶ್ ಕೃಷ್ಣನ್ ಸಂಗೀತ ಸಾಮ್ರಾಟನ ಅಗಲಿಕೆಗೆ ಭಾವುಕ ಮಾತುಗಳನ್ನು ನುಡಿದಿದ್ದಾರೆ. “ ಈಗ ನಾವೇನು ಅಷ್ಟೋ ಇಷ್ಟೋ ಹಾಡುತ್ತಿದ್ದೆವೆಯೋ ಅದು ಎಸ್ಪಿಬಿ ಅವರು ಹಾಕಿದ ಭಿಕ್ಷೆ. ಇಂಥಹ ಮತ್ತೊಬ್ಬ ಗಾಯಕ ಹುಟ್ಟಿ ಬರಬೇಕೆಂದರೆ ಇನ್ನೂ 500 ವರ್ಷ ಬೇಕು. ಅಂಥದ್ದೊಂದು ಮೇರು ಪರ್ವತವನ್ನು ನಾವಿಂದು ಕಳೆದುಕೊಂಡಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಗೀತ ನಿರ್ದೇಶಕ ಗುರುಕಿರಣ್
ಎಸ್ಪಿಬಿ ಅವರ ಅಗಲಿಕೆಗೆ ಸಂತಾಪ ಸೂಚಿಸಿರುವ ಸಂಗೀತ ನಿರ್ದೇಶಕ ಗುರುಕಿರಣ್, ನನ್ನ ಪ್ರಕಾರ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನದಿಂದ ಒಂದು ಯುಗಾಂತ್ಯವಾಗಿದೆ. ಎಸ್ಪಿಬಿ ಇಲ್ಲದ ಭಾರತೀಯ ಚಿತ್ರರಂಗವನ್ನ ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗವನ್ನ ಕಲ್ಪಿಸಿಕೊಳ್ಳುವುದೂ ಕಷ್ಟ. ಒಂದು ತಲೆಮಾರು ಸಿನಿಮಾ ಸಂಗೀತದಲ್ಲಿ ಅನಭಿಷಕ್ತ ದೊರೆಯಾಗಿ ಬದುಕಿದ್ದವರು ಎಸ್ಪಿಬಿಯವರು. ನನ್ನ ಸಂಗೀತ ನಿರ್ದೇಶನದ ಮೊದಲ ಸಿನಿಮಾ ‘ಎ’ ದಲ್ಲಿ ‘ಮಾರಿಕಣ್ಣು ಹೋರಿ ಮ್ಯಾಗೆ’ ಹಾಡನ್ನು ಎಸ್ಪಿಬಿ ಹಾಡಿದ್ದರು. ಆ ಹಾಡು ರಾತ್ರೋರಾತ್ರಿ ಸೂಪರ್ ಹಿಟ್ ಆಯ್ತು. ಬಳಿಕ ನನ್ನ ಅವರ ನಡುವಿನ ಸಂಬಂಧ ಗಾಢವಾಯ್ತು. ಆನಂತರ ನಾನು ಸಂಗೀತ ನೀಡಿದ ಅನೇಕ ಹಾಡುಗಳಿಗೆ ಎಸ್ಪಿಬಿ ಧ್ವನಿಯಾದರು. ಕಲೆಗೆ ಕೊಡುತ್ತಿದ್ದ ಗೌರವ, ಸಿಂಪ್ಲಿಸಿಟಿ ವಿಷಯದಲ್ಲಿ ಎಸ್ಪಿಬಿ ಇಂದಿನ ಅದೆಷ್ಟೋ ಕಲಾವಿದರಿಗೆ ಮಾದರಿ ಎಂದಿದ್ದಾರೆ.
ಸಾಹಿತಿ ಕವಿರಾಜ್
ಸಾಹಿತಿ ಕವಿರಾಜ್ ಅವರು ಸಹ ಅಗಲಿದ “ಸ್ವರ ಕೋಗಿಲೆ”ಯ ಬಗ್ಗೆ ಬಾವಪೂರ್ವವಾಗಿ ಮಾತಾಡಿದ್ದಾರೆ. “ ಕನ್ನಡ ಸಿನಿಮಾದಲ್ಲಿ ಹಾಡುಗಳು ಅಂದರೆ ಎಸ್ಪಿಬಿ ಎನ್ನುವಷ್ಟರ ಮಟ್ಟಿಗೆ ಹುಚ್ಚು ಹಿಡಿಸಿದ್ದ ಅವರೂಪದ ಗಾಯಕ. ನಾನು ಬರೆದ ‘ಗರನೆ.. ಗರಗರನೆ…’, ‘ಚಾಮುಂಡಿ ತಾಯಿಯಾಣೆ…’ ಹೀಗೆ ಸುಮಾರು 50ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿ, ಅದನ್ನು ಜನರ ಬಾಯಲ್ಲಿ ಗುನುಗುಡುವಂತೆ ಮಾಡಿದ ಮಹಾನ್ ಗಾಯಕ. ಎದುರು ಸಿಕ್ಕಾಗಲೆಲ್ಲ ಆತ್ಮೀಯ ಅಪ್ಪುಗೆಯ ಮೂಲಕ ಪ್ರೀತಿ ತೋರಿಸುತ್ತಿದ್ದ, ಹೊಸಬರನ್ನು ಪ್ರೋತ್ಸಾಹಿಸುತ್ತಿದ್ದಂತಹ ಎಸ್ಪಿಬಿ ನಮ್ಮ ನಡುವೆಯೇ ಸಾಧನೆಯ ಮೇರು ಶಿಖರವೇರಿದ ಸಾಧಕ. ಇವತ್ತು ಅವರಿಲ್ಲ ಅಂದರೆ, ನಂಬಲಾಗುತ್ತಿಲ್ಲ. ಸಂಗೀತ ಕ್ಷೇತ್ರದ ಮಟ್ಟಿಗೆ ನಿಜವಾದ ಅರ್ಥದಲ್ಲಿ ಇದು ತುಂಬಲಾರದ ನಷ್ಟ. ಕನ್ನಡದ ಮಟ್ಟಿಗೆ ಎಸ್ಪಿಬಿ ದೈಹಿಕವಾಗಿ ಇಲ್ಲದಿದ್ದರೂ, ಹಾಡುಗಳ ಮೂಲಕ ಯಾವತ್ತೂ ಜೀವಂತವಾಗಿರುತ್ತಾರೆ. ಕನ್ನಡ ಚಿತ್ರರಂಗ, ಸಂಗೀತ ಕ್ಷೇತ್ರ, ಕೇಳುಗರು ಎಲ್ಲರಿಗೂ ಹೃದಯ ಭಾರವಾಗಿದೆ” ಎಂದು ಕಂಬನಿ ಮಿಡಿದ್ದಾರೆ.
ಗಾಯಕಿ ಸಂಗೀತಾ ಕಟ್ಟಿ
ಎಸ್ಪಿಬಿ ಅವರ ಗರಡಿಯಲ್ಲಿ ಪಳಗಿದ ಗಾಯಕಿ ಸಂಗೀತಾ ಕಟ್ಟಿ, ಸ್ವರ ಮಾಂತ್ರಿತ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. “ನಮ್ಮ ಕನ್ನಡ ನಾಡಿಗೆ ಎಸ್ ಬಿಬಿ ಅವರು ಒಂದು ವರ. ನಮ್ಮ ನಾಡಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಾಡನ್ನು ಹಾಡಿರುವುದು ಭುವನೇಶ್ವರಿಯ ವರ. ನನ್ನ ಪಾಲಿಗೆ ಅವರು ಗುರು ಶಕ್ತಿ. ಅವರನ್ನು ಮಿಸ್ ಮಾಡಿಕೊಳ್ಳುವ ಬಗ್ಗೆ ಆದಿ-ಅಂತ್ಯ ಇಲ್ಲ” ಎಂದು ಭಾವುಕರಾಗಿದ್ದಾರೆ. ಅಲ್ಲದೇ ನನಗೆ ಹಾಡಿನ ವಿವಿಧ ಆಯಾಮ ಗೊತ್ತೇ ಇರಲಿಲ್ಲ. ಅಂತಹ ಸಮಯದಲ್ಲಿ ಅವರು ಪರಿಚಯ ಆಗಿದ್ದು ನನ್ನ ಜೀವನದ ದೊಡ್ಡ ತಿರುವು. ಅವರೊಳಗಿನ ಒಂದು ಶಕ್ತಿಗೆ ಅವರೇ ಶಕ್ತಿ. ಅವರನ್ನು ಅಳೆಯೋದು ಯಾವುದಕ್ಕೂ ನಿಲುಕುವುದಿಲ್ಲ” ಎಂದಿದ್ದಾರೆ.