ರಂಬುಟಾನ್ ಹಣ್ಣನ್ನು ನುಂಗಿದ ಆರು ತಿಂಗಳ ಮಗು
ಕೊಚ್ಚಿ, ಅಗಸ್ಟ್ 6: ಆರು ತಿಂಗಳ ಮಗುವೊಂದು ಆಕಸ್ಮಿಕವಾಗಿ ರಂಬುಟಾನ್ ಹಣ್ಣನ್ನು ನುಂಗಿ 15 ನಿಮಿಷಗಳ ಕಾಲ ಉಸಿರಾಟ ನಿಲ್ಲಿಸಿದ ಘಟನೆ ಕೇರಳದ ಅಲುವಾದಲ್ಲಿ ನಡೆದಿದೆ.
ಮಗುವಿಗೆ ಉಸಿರಾಟ ಅಥವಾ ಚಲನೆ ನಿಂತಿದ್ದ ಕಾರಣ, ಮಗುವಿನ ಪೋಷಕರು ಕೂಡಲೇ ಕೊಚ್ಚಿಯ ರಾಜಗಿರಿ ಆಸ್ಪತ್ರೆಗೆ ಧಾವಿಸಿದರು. ಆಸ್ಪತ್ರೆಗೆ ಆಗಮಿಸಿದಾಗ ಮಗುವಿಗೆ ಹೃದಯ ಸ್ತಂಭನವಾಯಿತು. ನಂತರ ಮಗುವಿಗೆ ಸುಮಾರು 15 ನಿಮಿಷಗಳ ಕಾಲ ವೈದ್ಯರು ಮತ್ತು ದಾದಿಯರು ತುರ್ತು ಸಿಪಿಆರ್ ನೀಡಿದ ಬಳಿಕ ಚೇತರಿಕೆ ಕಂಡಿತು.

ತಪಾಸಣೆಯ ವೇಳೆ ಮಗುವಿನ ಶ್ವಾಸನಾಳದಲ್ಲಿ ರಂಬುಟಾನ್ ಸಿಲುಕಿರುವುದು ಕಂಡುಬಂದಿದ್ದು, ವೈದ್ಯರ ಸತತ ಪ್ರಯತ್ನದಿಂದಾಗಿ ಹಣ್ಣನ್ನು ಹೊರತೆಗೆಯಲಾಯಿತು. 15 ನಿಮಿಷ ಕಾಲ ಮಗು ಉಸಿರಾಟ ನಿಲ್ಲಿಸಿದ ಕಾರಣ ಮೆದುಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಐಸಿಯು ಘಟಕದ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಮಗು ಚೇತರಿಕೆ ಕಂಡಿದ್ದು, ಸಂಪೂರ್ಣ ಚೇತರಿಕೆ ಕಾಣಲು ಕೆಲವು ದಿನಗಳ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.








