ಬೆಂಗಳೂರು ನಗರವನ್ನು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿ ರೂಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 350 ಕೋಟಿ ರೂ. ವೆಚ್ಚದಲ್ಲಿ ಆಕಾಶಗೋಪುರ ನಿರ್ಮಿಸಲು ಮುಂದಾಗಿದೆ. ಈ ಗೋಪುರವನ್ನು 250 ಮೀಟರ್ ಎತ್ತರದಲ್ಲಿ ನಿರ್ಮಿಸಲು ಯೋಜಿಸಲಾಗಿದೆ.
ಸ್ಥಳದ ಆಯ್ಕೆ
-ಹೆಮ್ಮಿಗೆಪುರ (ನೈಸ್ ಕ್ಲೋವರ್ ಲೀಫ್ ಹತ್ತಿರ): ಬಿಬಿಎಂಪಿ ಈ ಸ್ಥಳವನ್ನು ಪ್ರಥಮವಾಗಿ ಗುರುತಿಸಿದೆ. ಈ ಸ್ಥಳವು ತುಮಕೂರು, ಕನಕಪುರ, ಮೈಸೂರು, ಹೊಸೂರು ರಸ್ತೆಗಳಿಂದ ಸುಗಮ ಸಂಪರ್ಕವಿದ್ದು, ವಾಹನ ಸಂಚಾರಕ್ಕೆ ಅಡಚಣೆ ಕಡಿಮೆ ಇದೆ.
– ವಿಶ್ವವಿದ್ಯಾಲಯದ ಜ್ಞಾನಭಾರತಿ: ಈ ಸ್ಥಳವು ವಿಶ್ವವಿದ್ಯಾಲಯದ ಬೆಳವಣಿಗೆಗೆ ಆಡಚಣೆ ಉಂಟುಮಾಡಬಹುದು ಮತ್ತು ಸಂಚಾರದಟ್ಟಣೆ ಹೆಚ್ಚಿಸಬಹುದು.
-ಕೊಮ್ಮಘಟ್ಟ (ನೈಸ್‌ರಸ್ತೆ ಹತ್ತಿರ): ವಸತಿ ನಿಬಿಡ ಪ್ರದೇಶವಾಗಿದ್ದು, ಸ್ಥಳೀಯವಾಗಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.
ನಿರ್ಮಾಣದ ಸವಾಲುಗಳು
-ವಿಮಾನ ನಿಲ್ದಾಣಗಳ ನಿರ್ಬಂಧ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಯಲಹಂಕ ವಿಮಾನ ನಿಲ್ದಾಣ ಮತ್ತು ಹೆಚ್.ಎ.ಎಲ್ ವಿಮಾನ ನಿಲ್ದಾಣಗಳ ಹತ್ತಿರ 250 ಮೀಟರ್ ಎತ್ತರಕ್ಕೆ ಗೋಪುರ ನಿರ್ಮಿಸಲು ನಿರ್ಬಂಧ ಇದೆ.
-ಸಾರ್ವಜನಿಕ ಆಕ್ಷೇಪಣೆ: ಬಿಬಿಎಂಪಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ನವೆಂಬರ್ 8ರೊಳಗೆ ಸಲ್ಲಿಸಲು ಸೂಚಿಸಿತ್ತು.ಈಗ ಆ ಗಡುವು ಸಹ ಮುಗಿದಿದೆ.
ಪ್ರಸ್ತುತ ಈ ಹಿನ್ನೆಲೆಯಲ್ಲಿ ಹೆಮ್ಮಿಗೆಪುರ (ನೈಸ್‌ರಸ್ತೆ ಹತ್ತಿರ) ಜಾಗವನ್ನು ಪ್ರಥಮ ಆಯ್ಕೆ ಮಾಡಿಕೊಂಡಿರುವುದಾಗಿ ಬಿಬಿಎಂಪಿ ಹೇಳಿದೆ.
ಇನ್ನು ಆಕಾಶ ಗೋಪುರ ನಿರ್ಮಾಣ ಮಾಡುವುದಕ್ಕೆ ವಿಸ್ತೃತ ಯೋಜನಾ ವರದಿ (DPR) ತಯಾರಿಸುವಂತೆ ಆಸ್ಟ್ರಿಯಾದ ಸಂಸ್ಥೆಯೊಂದನ್ನು ಬಿಬಿಎಂಪಿ ಈಗಾಗಲೇ ಆಯ್ಕೆ ಮಾಡಿಕೊಂಡಿದೆ. ಇನ್ನು ಟೆಂಡರ್ ಪ್ರಕ್ರಿಯೆಯಲ್ಲಿ ಆಸ್ಟ್ರಿಯಾದ ಕೂಪ್ ಹಿಮ್ಮೆಲ್ಬ್ ಸಂಸ್ಥೆ ಮಾತ್ರ ಭಾಗವಹಿಸಿತ್ತು. ಹೀಗಾಗಿ, ಇದೇ ಕಂಪನಿಗೆ ಡಿಪಿಆರ್ ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿದೆ.
ಈ ಆಕಾಶಗೋಪುರವು ಬೆಂಗಳೂರಿನ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ನಗರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗುರುತಾಗಿ ಹೊರಹೊಮ್ಮಿಸಲು ಸಹಾಯ ಮಾಡಲಿದೆ.








