ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಸ್ಲಂ ಭರತ್ ಎನ್ಕೌಂಟರ್ ಗೆ ಬಲಿಯಾಗಿದ್ದಾನೆ.
ಸ್ಲಂ ಭರತ್ನನ್ನು ಹೈದರಾಬಾದ್ನಲ್ಲಿ ಬಂಧಿಸಿದ್ದ ಪೊಲೀಸರು ನಿನ್ನೆ ಬೆಂಗಳೂರಿಗೆ ಕರೆತರುತ್ತಿದ್ದರು. ಈ ವೇಳೆ ಪೀಣ್ಯ ಬಳಿ ಭರತ್ ಹಾಗೂ ಆತನ ಗ್ಯಾಂಗ್ 2 ಕಾರುಗಳಲ್ಲಿ ಬಂದು ಪೊಲೀಸರ ಕಾರನ್ನು ಅಡ್ಡಗಟ್ಟಿ, ಗುಂಡು ಹಾರಿಸಿ, ಭರತ್ ಪೊಲೀಸ್ ವಾಹನದಿಂದ ಇಳಿದು ಪರಾರಿಯಾಗಿದ್ದ.
ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಸ್ಲಂ ಭರತನ ಬೆನ್ನತ್ತಿದ ಪೊಲೀಸರು, ಹೆಸರುಘಟ್ಟ ಬಳಿ ಆತನ ಕಾರು ಇರುವುದನ್ನು ಪತ್ತೆ ಮಾಡುತ್ತಾರೆ. ಸ್ಲಂ ಭರತನ ಬೆನ್ನಟ್ಟಿದ ರಾಜಗೋಪಾಲನಗರ ಠಾಣೆ ಪೊಲೀಸರು ಆತ ಕಾರನ್ನು ಅಡ್ಡಗಟ್ಟುತ್ತಾರೆ. ಈ ವೇಳೆ ಪೊಲೀಸರ ಮೇಲೆ ಭರತ್ ಮೂರು ಸುತ್ತು ಗುಂಡು ಹಾರಿಸಿದ ಪರಿಣಾಮ ಒರ್ವ ಇನ್ ಸ್ಪೆಕ್ಟರ್ ಅವರ ಹೊಟ್ಟೆಗೆ ಒಂದು ಗುಂಡು ತಗುಲಿದೆ. ಮತ್ತೆರಡು ಗುಂಡು ಪೊಲೀಸರ ಕಾರುಗಳ ಮೇಲೆ ಬಿದ್ದಿದೆ.
ಈ ವೇಳೆ ಇನ್ ಸ್ಪೆಕ್ಟರ್ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಕುಸಿದು ಬಿದ್ದ ಭರತನನ್ನ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದಿದ್ದಾರೆ. ಎರಡು ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದ ಸ್ಲಂ ಭರತ್ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಇನ್ನು, ಕಾಮಾಕ್ಷಿಪಾಳ್ಯ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸ್ಲಂ ಭರತ್ನನ್ನು ಪೊಲೀಸರು ಬಂಧಿಸಲು ಯತ್ನಿಸಿದಾಗ ರಾಜಗೋಪಾಲನಗರ ಪೊಲೀಸರ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಈ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








