ಹೃದಯ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದ 40 ದಿನದ ಪುಟ್ಟ ಕಂದಮ್ಮ ಆರೋಗ್ಯವಾಗಿ ಇಂದು ಡಿಸ್ಚಾರ್ಜ್ ಆಗಿದೆ. ಫೆಬ್ರವರಿ 6ರಂದು ಬೆಂಗಳೂರಲ್ಲಿ ಚಿಕಿತ್ಸೆ ನೀಡಲು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಬೆಂಗಳೂರಿನ ಜಯದೇವ ಆಸ್ಪತ್ರೆಯ ವೈದ್ಯರ ತಂಡ 40 ದಿನದ ಸೈಫುಲ್ ಅಝ್ಮಾನ್ ಗೆ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಮಗು ಆರೋಗ್ಯವಾಗಿ ಇಂದು ಡಿಸ್ಚಾರ್ಜ್ ಆಗಿದೆ.
ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವ ಕುರಿತು ಮಾಹಿತಿ ನೀಡಿರುವ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್, ಫೆಬ್ರವರಿ 6ರಂದು 40 ದಿನದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. 7ರಂದು 12 ಜನರ ವೈದ್ಯರ ತಂಡದಿಂದ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಮಗು ಈಗ ಆರೋಗ್ಯ ವಾಗಿದೆ. ಹೃದಯದ ಎಡಭಾಗಕ್ಕೆ ಕನೆಕ್ಟ್ ಆಗಬೇಕಿದ್ದ 4 ರಕ್ತನಾಳಗಳು ಬಲಭಾಗಕ್ಕೆ ಕನೆಕ್ಟ್ ಆಗಿತ್ತು. ಹೀಗಾಗಿ ಈ ಚಿಕಿತ್ಸೆ ಬಹಳಷ್ಟು ಕ್ಲಿಷ್ಟಕರ ಮತ್ತು ಸವಾಲಿನಿಂದ ಕೂಡಿತ್ತು. ಮಗುವಿನ ಚಿಕಿತ್ಸೆಗೆ ಒಂದೂವರೆ ಲಕ್ಷ ರೂ. ಖರ್ಚಾಗಿದ್ದು, 1,20,000 ಬಿಪಿಎಲ್ ಕ್ಯಾಟಗರಿಯಿಂದ ಸಿಕ್ಕಿದೆ. ಉಳಿದ ಹಣವನ್ನು ಜಯದೇವ ಆಸ್ಪತ್ರೆಯ ಆಂತರಿಕ ಸಂಪನ್ಮೂಲದಿಂದ ಭರಿಸಲಾಗಿದ್ದು, ಮಗುವಿನ ಶಸ್ತ್ರಚಿಕಿತ್ಸೆಯು ಸಂಪೂರ್ಣವಾಗಿ ಉಚಿತವಾಗಿದೆ ಎಂದರು.
ಮಗುವಿನ ಪೋಷಕರು ಇದೇ ಸಂದರ್ಭದಲ್ಲಿ ಮಾತನಾಡಿ ಮಂಗಳೂರಿಂದ ಬೆಂಗಳೂರಿಗೆ ಕರೆದುಕೊಂಡು ಬರುವಾಗ ನಮಗೆ ಮಗು ಬದುಕುಳಿಯುವ ಆಸೆ ಇರಲಿಲ್ಲ. ಆದರೆ ವೈದ್ಯರು ನಮ್ಮ ಮಗುವನ್ನು ಉಳಿಸಿದ್ದಾರೆ. ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ ಎಂದು ಸಂತೋಷ ವ್ಯಕ್ತಪಡಿಸಿದರು.








