ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕಲಿಸಬೇಕು – ಸ್ಮೃತಿ ಇರಾನಿ…
ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್‌ಗಳ ಬಗ್ಗೆ ಅರಿವು ಮೂಡಿಸಬೇಕು. ಈ ಕುರಿತು ಮಕ್ಕಳಿಗೆ ತರಬೇತಿಯನ್ನೂ ನೀಡಬೇಕು. ಇದರಿಂದ ಮಕ್ಕಳಿಗೆ ತಮ್ಮ ಮೇಲೆ ಆಗುವ ಲೈಂಗಿಕ ದೌರ್ಜನ್ಯದ ಅರಿವು ಮೂಡುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಮೃತಿ ಇರಾನಿ ಅಭಿಪ್ರಾಯ ಪಟ್ಟಿದ್ದಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ಪೊಕ್ಸೊ ಕಾಯ್ದೆಯ ಕುರಿತು ದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
“ಪೊಕ್ಸೊ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಕೇಸುಗಳು ಕೋರ್ಟ್‌ಗಳಲ್ಲಿ ಶೀಘ್ರವಾಗಿ ವಿಲೇವಾರಿಯಾಗುತ್ತಿಲ್ಲ ಭಾರತದಲ್ಲಿ ಸುಮಾರು ಎರಡು ಲಕ್ಷದಷ್ಟು ಕೇಸ್‌ಗಳು ಬಾಕಿ ಇವೆ. ದೆಹಲಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಕೇಸುಗಳ ಸಂಖ್ಯೆ ಹೆಚ್ಚಿದೆ. ಒಟ್ಟಾರೆ ಕೇಸುಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಒಂದು ಕೇಸ್ ವಿಚಾರಣೆ ಪೂರ್ಣಗೊಳ್ಳಲು 509 ದಿನಗಳು ಬೇಕಾಗುತ್ತವೆ. ಹೀಗಾಗಿ ಮಕ್ಕಳು ಹೆಚ್ಚು ನೋವು ಅನುಭವಿಸಬೇಕಾಗುತ್ತದೆ ಎಂದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಸಮಾಜದ ಅಂಜಿಕೆಯಿಂದ ಎಷ್ಟೋ ಪಾಲಕರು ತಮ್ಮ ಮಕ್ಕಳ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ದಾಖಲು ಮಾಡದೇ ಇರುವ ಕಾರಣ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು.
ಈಗ ನಡೆದಿರುವ ಅಧ್ಯಯನಗಳ ಪ್ರಕಾರ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವವರು ಹೆಚ್ಚಿನ ರೀತಿಯಲ್ಲಿ ಅವರಿಗೆ ಪರಿಚಯಸ್ಥರೇ ಆಗಿರುತ್ತಾರೆ. ಅಂಥ ಸಂದರ್ಭಗಳಲ್ಲಿಯೂ ಕುಟುಂಬಸ್ಥರು ಕೇಸ್ ದಾಖಲಿಸಲು ಹಿಂದೇಟು ಹಾಕುತ್ತಿರುವ ಕಾರಣ ಮಕ್ಕಳಿಗೆ ನ್ಯಾಯ ಸಿಗುತ್ತಿಲ್ಲ ಎಂದು ಹೇಳಿದರು.
Smriti Irani: Children should be taught good touch and bad touch at school level








