11 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿದ ಸ್ನೇಕ್ ಕಿರಣ್
ಶಿವಮೊಗ್ಗ : ಸ್ನಾನದ ಕೋಣೆಗೆ ನುಗ್ಗಿದ 11 ಅಡಿಯ ಕಾಳಿಂಗ ಸರ್ಪವನ್ನು ಶಿವಮೊಗ್ಗದ ಉರಗ ರಕ್ಷಕ ಸ್ನೇಕ್ ಕಿರಣ್ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಬೇಸಿಗೆ ಸಮಯದಲ್ಲಿ ಹಾವುಗಳು ಹೆಚ್ಚಾಗಿ ಸಾವರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತವೆ. ಕಾರಣ ಆಹಾರ ಅರಸುತ್ತ ಮತ್ತು ಬಿಸಿಲನ ಬೇಗೆ ತಾಳಲಾರದೆ ಹುತ್ತದಿಂದ ಆಚೆ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತವೆ. ಶಿವಮೊಗ್ಗದ ತೀರ್ಥಹಳ್ಳಿಯ ತಾಲೂಕಿನ ಮಂಡಗದ್ದೆ ಹೋಬಳಿಯ ಕೆರೆಕೊಪ್ಪದ ನಿವಾಸಿ ಆನಂದ ನಾಯ್ಕರ್ ಅವರ ಸ್ನಾನದ ಕೋಣೆಯಲ್ಲಿ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪ ಸೇರಿಕೊಂಡಿತ್ತು.
ಹಾವನ್ನು ಕಂಡು ಭಯಭೀತರಾದ ಮನೆ ಮಾಲೀಕ, ಕೂಡಲೇ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣ ಗ್ರಾಮಕ್ಕೆ ತೆರಳಿದ ಸ್ನೇಕ್ ಕಿರಣ್ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ, ಕಾಳಿಂಗವನ್ನು ರಕ್ಷಿಸಿದರು.
ಈ ವೇಳೆ ಕಾಳಿಂಗ ಸರ್ಪ ಕಿರಣ್ ಮೇಲೆ ದಾಳಿ ಮಾಡಲು ಯತ್ನಿಸಿತು. ನಂತರ ಅದನ್ನು ಸುರಕ್ಷಿತವಾಗಿ ಕಿರಣ್ ಸೆರೆ ಹಿಡಿದರು. ಬಳಿಕ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಹಾವನ್ನು ಕಾಡಿಗೆ ಬಿಡಲಾಯಿತು.