ಇಂಗ್ಲೆಂಡ್ ಗೆ ಸವಾಲಾದ ಸ್ನೇಹಾ -ತನಿಯಾ- ಏಕೈಕ ಟೆಸ್ಟ್ ಪಂದ್ಯ ಡ್ರಾ..!
ಭಾರತ ಮಹಿಳಾ ತಂಡ ಬ್ರಿಸ್ಟೋಲ್ ನಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಗಿದೆ.
ಭಾರತ ತಂಡದ ಸ್ನೇಹಾ ರಾಣಾ ಮತ್ತು ತನಿಯಾ ಭಾಟಿಯಾ ಅವರ ಜವಾಬ್ದಾರಿಯುತ ಮತ್ತು ತಾಳ್ಮೆಯ ಆಟದ ಮೂಲಕ ಇಂಗ್ಲೆಂಡ್ ಬೌಲರ್ ಗಳನ್ನು ಕಾಡಿದ್ರು. ಅಲ್ಲದೆ ಭಾರತ ತಂಡವನ್ನು ಸೋಲಿನಿಂದಲೂ ಬಚಾವ್ ಮಾಡಿದ್ರು.
165 ರನ್ ಗಳ ಹಿನ್ನಡೆಯೊಂದಿಗೆ ಫಾಲೋ ಆನ್ ಗೆ ಸಿಲುಕಿದ್ದ ಭಾರತ ಮಹಿಳಾ ತಂಡ ಇಂಗ್ಲೆಂಡ್ ತಂಡಕ್ಕೆ ದಿಟ್ಟ ಸವಾಲನ್ನೇ ನೀಡಿತ್ತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (63 ರನ್ ), ದೀಪ್ತಿ ಶರ್ಮಾ (54 ರನ್) ಮತ್ತು ಪೂನಮ್ ರಾತ್ (39 ರನ್) ಉಪಯುಕ್ತವಾಗಿಯೇ ಬ್ಯಾಟಿಂಗ್ ನಡೆಸಿದ್ರು.
ಆದ್ರೆ ನಾಯಕಿ ಮಿಥಾಲಿ ರಾಜ್ (4 ರನ್) ಮತ್ತು ಹರ್ಮನ್ ಪ್ರಿತ್ ಕೌರ್ (8 ರನ್) ಹಾಗೂ ಪೂಜಾ ವಾಸ್ಟ್ರಕರ್ (12 ರನ್), ಶಿಖಾ ಪಾಂಡೆ (18ರನ್) ವಿಕೆಟ್ ಪತನಗೊಂಡಾಗ ಭಾರತ ತಂಡ ಸೋಲಿನ ಭೀತಿಗೆ ಸಿಲುಕಿತ್ತು.
ಈ ಹಂತದಲ್ಲಿ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ಸ್ನೇಹಾ ರಾಣಾ ಮತ್ತು ತನಿಯಾ ಭಾಟಿಯಾ ತಂಡಕ್ಕೆ ಆಧಾರವಾಗಿ ನಿಂತ್ರು. ಅಲ್ಲದೆ, ಎಂಟನೇ ವಿಕೆಟ್‍ಗೆ ಅಜೇಯ 104 ರನ್ ಕಲೆ ಹಾಕಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಸಫಲರಾದ್ರು.
ಸ್ನೇಹಾ ರಾಣಾ ಅವರು 154 ಎಸೆತಗಳಲ್ಲಿ 13 ಬೌಂಡರಿಗಳ ಸಹಾಯದಿಂದ ಅಜೇಯ 80 ರನ್ ಗಳಿಸಿದ್ರೆ, ತನಿಯಾ ಭಾಟಿಯಾ ಅವರು 88 ಎಸೆತಗಳಲ್ಲಿ ಆರು ಬೌಂಡರಿಗಳ ನೆರವಿನಿಂದ ಅಜೇಯ 44 ರನ್ ಸಿಡಿಸಿದ್ರು.
ಚೊಚ್ಚಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲೂ ಅಮೋಘ ಬ್ಯಾಟಿಂಗ್ ಜೊತೆ ಅರ್ಧಶತಕ ದಾಖಲಿಸಿದ್ದ ಶಫಾಲಿ ವರ್ಮಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.
ಇಂಗ್ಲೆಂಡ್ ಮೊದಲ ಇನಿಂಗ್ಸ್ – 9 ವಿಕೆಟ್ ಗೆ 396
ಭಾರತ ಮಹಿಳಾ ತಂಡ – ಮೊದಲ ಇನಿಂಗ್ಸ್ 231 ರನ್. ಎರಡನೇ ಇನಿಂಗ್ಸ್ – 8 ವಿಕೆಟ್ ಗೆ 344.








