ನವದೆಹಲಿ : ಲಡಾಕ್ ಗಡಿಯಲ್ಲಿ ಭಾರತ ಚೀನಾ ಸೈನಿಕರ ನಡುವಿನ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಇಂದು ವಿಡಿಯೋ ಒಂದನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನಮ್ಮ ನಿಶಸ್ತ್ರ ಸೈನಿಕರನ್ನು ಕೊಲ್ಲಲು ಚೀನಾಗೆ ಎಷ್ಟು ಧೈರ್ಯ ಎಂದು ಇಪ್ಪತ್ತು ಸೈನಿಕರ ಹತ್ಯೆ ಮಾಡಿದ ಚೀನಾ ಸೇನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಸೈನಿಕರನ್ನು ಗಡಿಗೆ ನಿಶಸ್ತ್ರವಾಗಿ ಹುತಾತ್ಮರಾಗಲು ಕಳುಹಿಸಿದ್ದೇಕೆ ಎಂದು ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಜೊತೆಗೆ ಟ್ವಿಟ್ಟರ್ ನಲ್ಲಿ ರಕ್ಷಣಾ ಸಚಿವರನ್ನೂ ತರಾಟೆಗೆ ತೆಗೆದುಕೊಂಡಿರುವ ಅವರು, ‘ಟ್ವಿಟ್ಟರ್ ನಲ್ಲಿ ಚೀನಾ ಹೆಸರನ್ನು ಉಲ್ಲೇಖಿಸದೇ ಭಾರತೀಯ ಸೇನೆಗೆ ಏಕೆ ಅಪಮಾನ ಮಾಡಿದಿರಿ? ಯೋಧರ ಸಾವಿಗೆ ಸಂತಾಪ ಸೂಚಿಸಲು ಎರಡು ದಿನ ತೆಗೆದುಕೊಂಡಿದ್ದು ಏಕೆ? ಅತ್ತ ಯೋಧರು ಹುತಾತ್ಮರಾಗುತ್ತಿರುವಾಗ ನೀವು ಚುನಾವಣಾ ಸಮಾವೇಶಗಳನ್ನು ನಡೆಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.
ಇನ್ನು ಇದೇ ವಿಚಾರವಾಗಿ ನಿನ್ನೆಯೂ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ನಮ್ಮ 20 ಯೋಧರು ಹುತಾತ್ಮರಾದರೂ, ಪ್ರಧಾನ ಮಂತ್ರಿ ಯಾಕೆ ಮೌನವಾಗಿದ್ದಾರೆ? ಯಾಕೆ ಅವರು ಅವಿತುಕೊಂಡಿದ್ದಾರೆ? ಇಲ್ಲಿಯವರೆಗೂ ನಡೆದಿದ್ದು ಸಾಕು. ನಾವು ಅಲ್ಲಿ ಏನೂ ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ನಮ್ಮ ಸೈನಿಕರನ್ನು ಕೊಲ್ಲಲು ಚೀನಾಗೆ ಎಷು ಧೈರ್ಯವಿರಬೇಕು? ಅವರು ಹೇಗೆ ನಮ್ಮ ಭೂಮಿಯನ್ನು ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದರು.








