ಬೆಳಗಾವಿ : ಕೊರೊನಾ ಸೋಂಕಿನಿಂದ ಮೃತಪಟ್ಟ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ನೆನೆದು ತಾಯಿ ಸೋಮವ್ವ ಅಂಗಡಿ ಕಣ್ಣೀರು ಹಾಕಿದ್ದಾರೆ. ನನ್ನ ಮಗ ಎಲ್ಲಿಯೂ ಹೋಗಿಲ್ಲ, ವಾಪಸ್ ಬಂದೇ ಬರ್ತಾನೆ ಎಂದು ಆಕ್ರಂದಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮುಂಗಾರು ಅಧಿವೇಶನಕ್ಕೆಂದು ದೆಹಲಿಗೆ ಹೋಗುವ ಮುನ್ನ ಕೆ.ಕೆ. ಕೊಪ್ಪಕ್ಕೆ ಬಂದು ಭೇಟಿಯಾಗಿ ತೆರಳಿದ್ದ.
ಊಟ ಮಾಡಪ್ಪ ಅಂದ್ರೆ ಅರ್ಧ ಕಪ್ ಚಹಾ ಕುಡಿದು ಹೋಗಿದ್ದ. ಯಾವಾಗ ಬರ್ತಿ ಅಂತ ಕೇಳಿದ್ದಕ್ಕೆ ತಿಂಗಳ ಬಳಿಕ ಮರಳಿ ಬರುತ್ತೇನೆ ಅಂದಿದ್ದ.
ಅಷ್ಟೊಂದು ದಿನ ಅಲ್ಲಿ ಇರಬೇಡ ಅಂದಿದಕ್ಕೆ ಪಾರ್ಲಿಮೆಂಟ್ ನಾಗ ರೊಕ್ಕಾ ಇಲ್ಲಮ, ನಾನು ಹೋಗ್ಬೇಕು, ಅಲ್ಲೇ ಇರಬೇಕು ಎಂದಿದ್ದ.
ಒಂದು ತಿಂಗಳ ಬಳಿಕ ಬಂದು ಭೇಟಿಯಾಗ್ತೀನಿ ಅಂದವ ಬಾರದ ಲೋಕಕ್ಕೆ ಹೋಗಿದ್ದಾನೆ. ಒಂದು ತಿಂಗಳವರೆಗೆ ಹೋಗಬೇಡ ಮಗನೆ ಎಂದಿದ್ದೆ ಎಂದು ಮಗನನ್ನ ನೆನೆದು ತಾಯಿ ಕಣ್ಣೀರು ಹಾಕಿದರು.
ಹಳ್ಳಿಯಿಂದ ಬೆಳಗಾವಿಗೆ ಬಂದು ಶಾಲೆ ಕಲಿತು ದೊಡ್ಡ ಮನುಷ್ಯನಾಗಿದ್ದ. ನನ್ನ ಮಾತು ಆತ ಎಂದಿಗೂ ಮೀರುತ್ತಿರಲಿಲ್ಲ. ನನ್ನ ಮಗ ಊರಾಗ ದೊಡ್ಡ ಸಾಲಿ, ಬಸವಣ್ಣನ ಗುಡಿ ಕಟ್ಟಿಸಿದ್ದ.
ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದ. ಊರಾಗ ಪೈಪ್‍ಲೈನ್ ಮಾಡಿಸಿದ್ದ. ನನ್ನ ಹೆಸರಲ್ಲಿ ಶಾಲೆನೂ ಕಟ್ಟಿಸಿ, ಹಳ್ಳಿ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದ ಎಂದು ತಾಯಿ ಸೋಮವ್ವ ಮಗನ ಕಾರ್ಯವನ್ನು ನೆನೆಸಿಕೊಂಡರು.
ಕೊರೊನಾ ಗೈಡ್ ಲೈನ್ಸ್ ನಂತೆ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆಯನ್ನು ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಕುಟುಂಬಸ್ಥರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಆದ್ರೆ ಸೋಮವ್ವ ಅವರಿಗೆ ವಯಸ್ಸಾಗಿರುವುದರಿಂದ ದೆಹಲಿಗೆ ಕರೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ಸೋಮವ್ವ ಅವರಿಗೆ ಮಗನ ಅಂತಿಮ ದರ್ಶನಕ್ಕೂ ಅವಕಾಶ ಇಲ್ಲದಂತಾಗಿದೆ.