ನವದೆಹಲಿ : ಇಂದಿನ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಯಾವುದೇ ಮಹತ್ವದ ಬದಲಾವಣೆಯ ನಿರ್ಧಾರ ತೆಗೆದುಕೊಳ್ಳದ ಕಾರಣ ಸೋನಿಯಾ ಗಾಂಧಿಯೇ ಇನ್ನೂ ಒಂದು ವರ್ಷಗಳ ಕಾಲಾವಧಿವರೆಗೆ ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ.
ಇಂದಿನ ಸಭೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ತಮ್ಮ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿ, ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಿಸಿ ಎಂದು ತಿಳಿಸಿದರು. ಆದರೆ ಕಾಂಗ್ರೆಸ್ ಮುಂಖಡರು ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಬೇಕು ಎಂದು ಮನವಿ ಮಾಡಿಕೊಂಡರು.
ಸಭೆಯಲ್ಲಿ ರಾಹುಲ್ ಗಾಂಧಿ ನಾಯಕತ್ವ ಬದಲಾವಣೆ ಬಗ್ಗೆ ಸೋನಿಯಾ ಗಾಂಧಿಗೆ ಪತ್ರ ಬರೆದ ಪಕ್ಷದ ಹಿರಿಯರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಪ್ರತಿಕ್ರಿಯೆ ವ್ಯಕ್ತಪಡಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಯೂಟರ್ನ್ ಹೊಡೆದ ಉಭಯ ನಾಯಕರು ಸ್ಪಷ್ಟನೆ ನೀಡಿ ಹೈಕಮಾಂಡ್ ಮುನಿಸನ್ನು ತಣ್ಣಗಾಗಿಸಲು ಮುಂದಾಗಿದ್ದರು.
ಕೊನೆಗೆ ದೀರ್ಘಾವಧಿ ಚರ್ಚೆ, ವಾಗ್ವಾದದ ನಂತರ ಸದ್ಯದ ಸ್ಥಿತಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ನಿರ್ಧರಿಸಿ, ಸೋನಿಯಾ ಗಾಂಧಿ ಅವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಮುಂದುವರಿಸಲು ಸಭೆ ನಿರ್ಧರಿಸಿರುವುದಾಗಿ ವರದಿ ವಿವರಿಸಿದೆ.








