ಬೆಂಗಳೂರು : ಸೋನಿಯಾ ಗಾಂಧಿ ಅವರೇ ರಾಹುಲ್ ಗಾಂಧಿ ಅವರ ಮನವೊಲಿಸಿ ಅಧ್ಯಕ್ಷರನ್ನಾಗಿ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, “ಗಾಂಧಿ ಕುಟುಂಬದವರಿಂದ ಮಾತ್ರ ಪಕ್ಷ ಉಳಿಸಲು ಸಾಧ್ಯ. ಗಾಂಧಿ ಕುಟುಂಬವೇ ಪಕ್ಷವನ್ನ ಮುನ್ನಡೆಸಬೇಕು. ನೀವೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಯಬೇಕು. ನಿಮ್ಮ ಆರೋಗ್ಯ ಸಹಕರಿಸದಿದ್ದರೆ ರಾಹುಲ್ ಗಾಂಧಿ ಅವರಿಗೆ ಜವಾಬ್ದಾರಿ ವಹಿಸಿ. ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವೊಲಿಸಿ,” ಎಂದು ಸೋನಿಯಾ ಬಳಿ ಕೋರಿದ್ದಾರೆ.
“ದೇಶದಲ್ಲಿ ಅಘೋಷಿತ ಎಮರ್ಜನ್ಸಿ ಎದುರಾಗಿದೆ. 1977 ಮತ್ತು 98 ರಲ್ಲಿ ಕಾಂಗ್ರೆಸ್?ಗೆ ಎದುರಾಗಿದ್ದ ಪರಿಸ್ಥಿತಿ ಈಗ ಮತ್ತೆ ಎದುರಾಗಿದೆ. ಅಂದು ಕಾಂಗ್ರೆಸ್ ನಾಯಕತ್ವವನ್ನ ಗಾಂಧಿ ಕುಟುಂಬವೇ ವಹಿಸಿಕೊಂಡು ಪಕ್ಷವನ್ನ ಮೇಲೆತ್ತಿತ್ತು. ಈಗ ಮತ್ತೆ ಗಾಂಧಿ ಕುಟುಂಬವೇ ಪಕ್ಷವನ್ನ ಮೇಲೆತ್ತಬೇಕು,” ಎಂದು ಸಿದ್ದರಾಮಯ್ಯ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.









