ನವದೆಹಲಿ : ದೇಶದ ಸದ್ಯದ ಪರಿಸ್ಥಿತಿ ಕುರಿತಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಏಪ್ರಿಲ್ 11ನೇ ತಾರೀಕಿನಂದು ನಡೆಯಲಿರುವ ಸಭೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.
ಕಾಂಗ್ರೆಸ್ ಪಕ್ಷ ಆಡಳಿತ ಇರುವ ರಾಜ್ಯಗಳಲ್ಲಿ ಕೊರೊನಾ ವಿರುದ್ಧ ಹೋರಾಡಲು ಹೇಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಲಹೆ ನೀಡಲಿದ್ದಾರೆ. ಜೊತೆಗೆ ಕಾಂಗ್ರೆಸ್ ವಿರೋಧ ಪಕ್ಷವಾಗಿರುವ ರಾಜ್ಯಗಳಲ್ಲಿ ಹೇಗೆ ಪರಿಸ್ಥಿತಿ ನಿಭಾಯಿಸುವುದು ಮತ್ತು ಸಂಕಷ್ಟದಲ್ಲಿರುವ ಜನರಿಗೆ ಹೇಗೆ ಸಹಾಯ ಮಾಡಬೇಕು ಎನ್ನುವುದರ ಬಗ್ಗೆ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ.
ಇನ್ನು ದೇಶಾದ್ಯಂತ ಹಲವು ಕಾಂಗ್ರೆಸ್ ನಾಯಕರು ತಮ್ಮ ಕೈಲಾದ ಸಹಾಯ ಜನರಿಗೆ ಮಾಡುತ್ತಿದ್ದಾರೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿ ಎಂದು ಸೋನಿಯಾ ಗಾಂಧಿ ಸಲಹೆ ನೀಡಬಹುದು ಎಂದು ಹೇಳಲಾಗುತ್ತಿದೆ.








