ನವದೆಹಲಿ: ಕೊರೊನಾ ವೈಸರ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 21 ದಿನಗಳ ಲಾಕ್ ಡೌನ್ ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಂಬಲ ವ್ಯಕ್ತಪಡಿಸಿ, ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ “ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ 21 ದಿನಗಳ ಲಾಕ್ ಡೌನ್ ಸ್ವಾಗತಾರ್ಹ ಕ್ರಮವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ, ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯನ್ನೂ ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಮತ್ತು ಸಹಕರಿಸುತ್ತೇವೆ” ಎಂದು ಹೇಳಲು ಬಯಸುವುದಾಗಿ ಸೋನಿಯಾ ತಿಳಿಸಿದ್ದಾರೆ.
ಅಲ್ಲದೇ ವೈದ್ಯರ ಸುರಕ್ಷತೆ, ಸಲಕರಣೆಗಳು ಸುಲಭ ಪೂರೈಕೆ, ಸಾಲ ಮುಂದೂಡಿಕೆ ಸೇರಿದಂತೆ ಮತ್ತಿತರ ಸಲಹೆಗಳನ್ನು ಸೂಚಿಸಿದ್ದಾರೆ. ವೈದ್ಯರು, ನರ್ಸ್ ಗಳು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗಾಗಿ ಎನ್ -95 ಮಾಸ್ಕ್ , ಹಜ್ಮತ್ ಸೂಟ್ ಮತ್ತಿತರ ಸಲಕರಣೆಗಳ ಅಗತ್ಯವಿದೆ. ಇಂತಹ ಸಲಕರಣೆಗಳ ಉತ್ಪಾದನೆ ಹಾಗೂ ಸಲಕರಣೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಇನ್ನು ರೈತರು , ವೇತನದಾರರರು ಸೇರಿದಂತೆ ಮತ್ತಿತರಿಂದ ಸಾಲ ಮರುಪಾವತಿಯನ್ನು ಆರು ತಿಂಗಳ ಕಾಲ ಮುಂದೂಡುವಂತೆ ಸೋನಿಯಾ ಗಾಂಧಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.








