ನವದೆಹಲಿ: ಭಾರತದಲ್ಲಿ ದಿನೇ ದಿನೇ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಭಾರತಕ್ಕೆ ತೆರಳುವ ಹಾಗೂ ಭಾರತದಿಂದ ಬರುವ ಪ್ರಯಾಣಿಕರಿಗೆ ಸೌದಿ ಅರೇಬಿಯಾ ನಿರ್ಬಂಧ ವಿಧಿಸಿದೆ.
ಸೌದಿಯ ನಾಗರಿಕ ವಿಮಾನಯಾನ ಪ್ರಾಧಿಕಾರವು ಈ ಆದೇಶ ಹೊರಡಿಸಿದೆ. ಇನ್ನೂ ಭಾರತದ ಜೊತೆಗೆ ಬ್ರೆಜಿಲ್ ಹಾಗೂ ಅರ್ಜೆಂಟೈನಾ ದೇಶಗಳಿಗೂ ನಿರ್ಬಂಧ ನಿಯಮ ಅನ್ವಯಿಸಲಿದೆ. ಇನ್ನೂ ಈ ದೇಶಗಳಿಂದ ಅಧಿಕೃತ ಸರ್ಕಾರಿ ಆಮಂತ್ರಣ ಹೊಂದಿರುವವರಿಗೆ ಮಾತ್ರವೇ ಸೌದಿಗೆ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
“ಸೌದಿ ಅರೇಬಿಯಾವು ಭಾರತ, ಬ್ರೆಜಿಲ್ ಮತ್ತು ಅರ್ಜೆಂಟೈನಾಗಳಿಗೆ ತೆರಳುವ ಮತ್ತು ಅವುಗಳಿಂದ ಆಗಮಿಸುವ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿದೆ. ಸೌದಿಗೆ ಆಗಮಿಸುವ 14 ದಿನಗಳ ಮುಂಚಿನ ಪ್ರಸ್ತಾವನೆಯನ್ನು ನೀಡಿರುವ ಎಲ್ಲರಿಗೂ ಇದು ಅನ್ವಯವಾಗಲಿದೆ” ಎಂದು ಜಿಎಸಿಎ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.








