ಕೆಲವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶ್ವ ನಾಯಕನಾಗುವ ಅರ್ಹತೆ ಇದೆ ಅಂತಾರೆ. ಆದ್ರೆ ಭಾರತದ ಪರ ವಿಶ್ವ ನಾಯಕನಾಗುವ ಅರ್ಹತೆ ಕೇವಲ ಮೋದಿಯವರಿಗೆ ಮಾತ್ರ ಇರೋದಲ್ಲ. ಮೋದಿಯ ಹಾಗೇ ಮತ್ತೊಬ್ಬ ಭಾರತೀಯ ಹೆಸರು ಕೇಳಿ ಬರುತ್ತಿದೆ. ಆದ್ರೆ ಆತ ರಾಜಕಾರಣಿಯಲ್ಲ. ಬದಲಾಗಿ ಒಬ್ಬ ಕ್ರಿಕೆಟಿಗ.
ಹೌದು, ಅವರ ಹೆಸರು ಸೌರವ್ ಗಂಗೂಲಿ. ಸೌರವ್ ಗಂಗೂಲಿ ಅಂದ ತಕ್ಷಣ ನೆನಪಾಗೋದು ಅವರ ನಾಯಕತ್ವದ ಗುಣಗಳು. ಗಂಗೂಲಿಯ ಬ್ಯಾಟಿಂಗ್‍ಗಿಂತ ಹೆಚ್ಚು ಸದ್ದು ಮಾಡಿರೋದೇ ಅವರ ನಾಯಕತ್ವ. ಮ್ಯಾಚ್ ಫಿಕಿಂಗ್ಸ್ ನಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾಗೆ ಹೊಸ ಆಯಾಮವನ್ನು ನೀಡಿರುವುದೇ ಗಂಗೂಲಿ. ವಿದೇಶಿ ನೆಲದಲ್ಲೂ ಭಾರತ ಗೆಲ್ಲಬಹುದು ಎಂಬುದನ್ನು ಸಾಬೀತುಪಡಿಸಿರುವುದು ಕೂಡ ಗಂಗೂಲಿಯ ಲೀಡರ್‍ಶಿಪ್. ಅಷ್ಟೇ ಯಾಕೆ, ಪ್ರತಿಭೆ ಇದ್ರೆ ಸಾಕು ಅಂತ ಅದೆಷ್ಟೋ ಯುವ ಆಟಗಾರರಿಗೆ ದಾರಿ ದೀಪವಾಗಿರುವುದು ಕೂಡ ಗಂಗೂಲಿಯೇ. ಆದ್ರೆ ಗಂಗೂಲಿಯ ಕ್ರಿಕೆಟ್ ಬದುಕಿನ ಮುಸ್ಸಂಜೆಯ ಟೈಮ್ ನಲ್ಲಿ ಬಿಸಿಸಿಐ ನಡೆಸಿಕೊಂಡ ರೀತಿ ಮಾತ್ರ ತುಸು ಬೇಸರವನ್ನುಂಟು ಮಾಡಿತ್ತು.
ಆದ್ರೆ ಗಂಗೂಲಿ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ. ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ಕ್ರಿಕೆಟ್ ಆಡಳಿತ ಕಡೆ ಒಲವು ತೋರಿದ್ದ ಗಂಗೂಲಿ ಕೊಲ್ಕತ್ತಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ್ರು. ಸದ್ಯ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಂತ ಬಿಸಿಸಿಐ ಅಧ್ಯಕ್ಷಗಾದಿಯನ್ನು ತಾನೇ ಬಯಸಿ ಹೋಗಲಿಲ್ಲ. ತನ್ನ ಚತುರ ನಾಯಕತ್ವದ ಗುಣಗಳು, ಪಾರದರ್ಶಕ ಮನಸ್ಥಿತಿಯಿಂದ ತಾನಾಗಿಯೇ ಬಿಸಿಸಿಐ ಅಧ್ಯಕ್ಷಪಟ್ಟ ಕೂಡ ಒಲಿದು ಬಂದಿತ್ತು.
ಇದೀಗ ಸೌರವ್ ಗಂಗೂಲಿ ಮತ್ತೊಂದು ಹೆಜ್ಜೆಯನ್ನಿಡುವ ಕಾಲ ಸನೀಹವಾಗುತ್ತಿದೆ. ಅದು ಕೂಡ ಗಂಗೂಲಿ ಬಯಸಿರಲಿಲ್ಲ. ಆದ್ರೆ ಆ ಸ್ಥಾನಕ್ಕೆ ಗಂಗೂಲಿಯೇ ಸೂಕ್ತ ಆಯ್ಕೆ. ಗಂಗೂಲಿ ಆ ಸ್ಥಾನವನ್ನು ಅಲಂಕರಿಸಿದ್ರೆ ವಿಶ್ವ ಕ್ರಿಕೆಟ್ ಇನ್ನಷ್ಟು ಸುಧಾರಣೆಯಾಗಲಿದೆ. ಮತ್ತಷ್ಟು ಉತ್ತುಂಗಕ್ಕೇರಲಿದೆ ಎಂಬ ಅಭಿಪ್ರಾಯವೂ ಮೂಡಿ ಬರುತ್ತಿದೆ.
ಅಂದ ಹಾಗೇ ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷರಾಗಬೇಕು ಎಂಬ ಸಣ್ಣ ಕೂಗು ದೂರದ ದಕ್ಷಿಣ ಆಫ್ರಿಕಾದಿಂದ ಕೇಳಿಬರುತ್ತಿದೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಕ್ರಿಕೆಟ್ ಸೌತ್ ಆಫ್ರಿಕಾದ ನಿರ್ದೇಶಕ ಗ್ರೇಮ್ ಸ್ಮಿತ್ ಗಂಗೂಲಿಯ ಬೆನ್ನಿಗೆ ನಿಂತಿದ್ದಾರೆ. ಅಲ್ಲದೆ ಸೌರವ್ ಗಂಗೂಲಿ ಯಾಕೆ ಐಸಿಸಿ ಅಧ್ಯಕ್ಷರಾಗಬೇಕು. ಅದ್ರಿಂದ ಆಗುವ ಲಾಭಗಳೇನು, ಗಂಗೂಲಿ ಆಯ್ಕೆಯೇ ಯಾಕೆ ಸೂಕ್ತ ಎಂಬುದನ್ನು ಗ್ರೇಮ್ ಸ್ಮಿತ್ ವಿವರವಾಗಿ ಹೇಳಿದ್ದಾರೆ.
ಕೊರೋನಾ ವೈರಸ್‍ನಿಂದಾಗಿ ವಿಶ್ವ ಕ್ರಿಕೆಟ್ ಕೂಡ ಕಂಗೆಟ್ಟು ಹೋಗಿದೆ. ಕ್ರಿಕೆಟ್ ಮಂಡಳಿಗಳು ದಿವಾಳಿಯಾಗುವ ಭೀತಿಯಲ್ಲಿವೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದಂತ ಕ್ರಿಕೆಟ್ ಮಂಡಳಿಗಳು ಕೂಡ ಆಂತಂಕದಲ್ಲಿವೆ. ಇದೀಗ ವಿಶ್ವದ ಎಲ್ಲಾ ಕ್ರಿಕೆಟ್ ಮಂಡಳಿಗಳು ಕೂಡ ಭಾರತದ ಮುಖ ಮಾಡುತ್ತಿವೆ. ಯಾಕಂದ್ರೆ ಬಿಸಿಸಿಐ ದುಡ್ಡಿನ ಕುಬೇರ ಎಂಬುದು ಗೊತ್ತು. ಹಾಗೇ ಭಾರತ ತಂಡವಾಡಿದ್ರೆ ಮಾತ್ರ ತಮ್ಮ ಬೊಕ್ಕಸವನ್ನು ತುಂಬಿಕೊಳ್ಳಬಹುದು ಎಂಬ ಲೆಕ್ಕಚಾರದಲ್ಲಿವೆ.
ಇನ್ನೊಂದೆಡೆ, ಕೊರೋನಾ ವೈರಸ್‍ನ ಸಂಕಷ್ಟದಿಂದ ಪಾರು ಮಾಡಲು ಬಿಸಿಸಿಐ ಪ್ರತಿನಿಧಿಯೊಬ್ಬರು ಐಸಿಸಿ ಸಾರಥ್ಯ ವಹಿಸಿದ್ರೆ ಸೂಕ್ತ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಸದ್ಯ ಐಸಿಸಿ ಮುಖ್ಯಸ್ಥರಾಗಿರುವ ಶಶಾಂಕ್ ಮನೋಹರ್ ಅವರ ಅಧಿಕಾರಾವಧಿ ಈ ತಿಂಗಳಿಗೆ ಕೊನೆಯಾಗುತ್ತಿದೆ. ಅಲ್ಲದೆ ಇನ್ನೂ ಎರಡು ತಿಂಗಳು ಅವರೇ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಮತ್ತೆ ಭಾರತದ ಪ್ರತಿನಿಧಿ ಐಸಿಸಿ ಮುಖ್ಯಸ್ಥರಾದ್ರೆ ತಮ್ಮದೇನು ಅಭ್ಯಂತರವಿಲ್ಲ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಜಾಕ್ ಫಾಲ್ ಹೇಳಿದ್ದಾರೆ. ಫೌಲ್ ಹೇಳಿಕೆಯ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯ ನಿರ್ದೇಶಕ ಗ್ರೇಮ್ ಸ್ಮಿತ್ ಗಂಗೂಲಿಯ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ.
ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷರಾದ್ರೆ ಕ್ರಿಕೆಟ್ ಬೆಳವಣಿಗೆಗೆ ಪೂರಕವಾಗಿರುತ್ತದೆ. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವಂತ ಸಾಮಥ್ರ್ಯ ಗಂಗೂಲಿಗಿದೆ. ಅಲ್ಲದೆ ಆಧುನಿಕ ಕ್ರಿಕೆಟ್ ಸವಾಲುಗಳು ಏನು ಎಂಬುದನ್ನು ಗಂಗೂಲಿ ಅರಿತುಕೊಂಡಿದ್ದಾರೆ. ಗಂಗೂಲಿಯ ನಾಯಕತ್ವ ವಿಶ್ವ ಕ್ರಿಕೆಟ್‍ಗೆ ಅಗತ್ಯವಾಗಿದೆ. ಭವಿಷಷ್ಯದ ದೃಷ್ಟಿಯಿಂದ ಗಂಗೂಲಿಯೇ ಐಸಿಸಿ ಮುಖ್ಯಸ್ಥರಾಗಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಗ್ರೇಮ್ ಸ್ಮಿತ್ ಹೇಳಿದ್ದಾರೆ.
ಇನ್ನೊಂದೆಡೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಶಶಾಂಕ್ ಮನೋಹರ್ ಅವರ ಉತ್ತರಾಧಿಕಾರಿ ಅಂತ ಬಿಂಬಿಸಲಾಗಿತ್ತು. ಆದ್ರೆ ಈಗ ಗ್ರೇಮ್ ಹೇಳಿಕೆಯಿಂದ ಐಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.








