ನಾಯಕತ್ವದಿಂದ ಕೆಳಗಿಳಿದಿರುವುದು ವೃತ್ತಿ ಬದುಕಿಗೆ ಹಿನ್ನೆಡೆಯಾಯ್ತು – ಸೌರವ್ ಗಂಗೂಲಿ
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ತನ್ನ ವೃತ್ತಿ ಬದುಕಿನ ಹಿನ್ನಡೆಗೆ ಕಾರಣವಾದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.
2005ರಲ್ಲಿ ನಾಯಕತ್ವದಿಂದ ಕೆಳಗಿಳಿಸಿದ್ದು ಸೌರವ್ ಗಂಗೂಲಿಯವರ ವೃತ್ತಿ ಬದುಕಿಗೆ ಹಿನ್ನೆಡೆಯಾಗಿದೆ. ಜೀವನದಲ್ಲಿ ಯಾವುದು ಕೂಡ ಗ್ಯಾರಂಟಿ ಇಲ್ಲ. ಒತ್ತಡವನ್ನು ಅನುಭವಿಸಲೇಬೇಕು ಎಂದು ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ.
ಸೌರವ್ ಗಂಗೂಲಿ ನಾಯಕನಾಗಿ ಟೀಮ್ ಇಂಡಿಯಾಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದರು. ಭಾರತ ಕ್ರಿಕೆಟ್ ತಂಡದಲ್ಲಿ ಮ್ಯಾಚ್ ಫಿಕ್ಸಿಂಗ್ ಕಳಂಕ ಆವರಿಸಿಕೊಂಡಿದ್ದಾಗ ಸೌರವ್ ಗಂಗೂಲಿ ನಾಯಕತ್ವವನ್ನು ವಹಿಸಿಕೊಂಡಿದ್ದರು. ಅಲ್ಲಿಯವರೆಗೆ ಭಾರತ ಕ್ರಿಕೆಟ್ ತಂಡವಾಗಿದ್ದ ತಂಡವನ್ನು ಟೀಮ್ ಇಂಡಿಯಾ ಎಂಬ ಪರಿಕಲ್ಪನೆಯೊಂದಿಗೆ ಹೊಸ ತಂಡವನ್ನು ಕಟ್ಟಿದ್ದರು.
ನಾಯಕನಾಗಿ ಎಲ್ಲವನ್ನು ತ್ಯಾಗ ಮಾಡಿದ್ದ ಗಂಗೂಲಿ, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ಧೋನಿ, ಜಹೀರ್ ಖಾನ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಆಶಿಷ್ ನೆಹ್ರಾ ಮೊದಲಾದ ಯುವ ಆಟಗಾರರ ಪ್ರತಿಭೆಯನ್ನು ಬೆಳಕಿಗೆ ತಂದ್ರು.
ವಿದೇಶಿ ನೆಲದಲ್ಲಿ ಸೋಲಿನ ಹಾದಿಯಲ್ಲಿದ್ದ ತಂಡವನ್ನು ಗೆಲುವಿನ ಹಾದಿಗೆ ಮರುಕಳಿಸುವಂತೆ ಮಾಡಿದ್ದರು.. ಅಷ್ಟೇ ಅಲ್ಲ, 2003ರ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾವನ್ನು ಫೈನಲ್ ಗೇರುವಂತೆ ಮಾಡಿದ್ದರು.
ತಂಡವನ್ನು ಯಶಸ್ವಿನ ಹಾದಿಯಲ್ಲೇ ಮುನ್ನಡೆಸುತ್ತಿದ್ದ ದಾದಾ ಬ್ಯಾಟಿಂಗ್ ಫಾರ್ಮ್ ಕೈಕೊಟ್ಟಿತ್ತು. ಜೊತೆಗೆ ಕೋಚ್ ಗ್ರೆಗ್ ಚಾಪೆಲ್ ಅವರ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು. ಹೀಗಾಗಿ ಅನಿವಾರ್ಯವಾಗಿ ಸೌರವ್ ಗಂಗೂಲಿ ತಂಡದ ನಾಯಕತ್ವದಿಂದ ಕೆಳಗಿಳಿಯಬೇಕಾಯ್ತು. ಆ ನಂತರ ಅವರು ತಾನೇ ಕಟ್ಟಿದ್ದ ತಂಡವನ್ನು ಸೇರಿಕೊಳ್ಳಲು ಒದ್ದಾಟ ನಡೆಸಬೇಕಾಯ್ತು.
ಇದೀಗ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಆಟಗಾರನಾಗಿ, ನಾಯಕನಾಗಿ ಯಶಸ್ವಿಯಾಗಿರುವ ಗಂಗೂಲಿ, ಆಡಳಿತಗಾರನಾಗಿಯೂ ಯಶ ಸಾಧಿಸುತ್ತಿದ್ದಾರೆ.