ಐಸಿಸಿ ಅಂಗಳಕ್ಕೆ ಕಾಲಿಟ್ಟ ಬಿಸಿಸಿಐ ಬಿಗ್ ಬಾಸ್ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಈಗ ಐಸಿಸಿ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಸೌರವ್ ಗಂಗೂಲಿ ಅವರನ್ನು ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಈ ವಿಚಾರವನ್ನು ಐಸಿಸಿಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಸಿಸಿಐ ಬಿಗ್ ಬಾಸ್ ಸೌರವ್ ಗಂಗೂಲಿ ಅವರು ಟೀಮ್ ಇಂಡಿಯಾ ಟೆಸ್ಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಜಾಗವನ್ನು ಅಲಂಕರಿಸಿದ್ದಾರೆ.
ಅನಿಲ್ ಕುಂಬ್ಳೆ ಅವರು 2012ರಿಂದ ಮೂರು ಅವಧಿಯಲ್ಲಿ ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿದ್ದರು. ಅನಿಲ್ ಕುಂಬ್ಳೆ ಅವಧಿಯಲ್ಲಿ ಸಂಶಯಾಸ್ಪದ ಬೌಲಿಂಗ್ ಶೈಲಿ ಮತ್ತು ಡಿಆರ್ ಎಸ್ ತಂತ್ರಜ್ಞಾನಗಳನ್ನು ಸುಧಾರಣೆ ಮಾಡುವಲ್ಲಿ ಪ್ರಯತ್ನಪಟ್ಟಿದ್ದಾರೆ. ಕಳೆದ 9 ವರ್ಷಗಳಿಂದ ಅನಿಲ್ ಕುಂಬ್ಳೆ ಅವರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಐಸಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಸೌರವ್ ಗಂಗೂಲಿ ವಿಶ್ವದ ಶ್ರೇಷ್ಠ ಆಟಗಾರ. ಜೊತೆಗೆ ಆಡಳಿತಗಾರನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಐಸಿಸಿ ಪುರುಷರ ಕ್ರಿಕೆಟ್ ಸಮಿತಿಯ ಮುಖ್ಯಸ್ಥನಾಗಿ ಕ್ರಿಕೆಟ್ ಆಟದ ಸುಧಾರಣೆಗೆ ಅವರ ಅನುಭವವನ್ನು ಧಾರೆ ಎರೆಯಲಿದ್ದಾರೆ ಅಂತ ಐಸಿಸಿ ಮುಖ್ಯಸ್ಥ ಗ್ರೆಗ್ ಬಾಕ್ಲೆ ಹೇಳಿದ್ದಾರೆ.
ಹಾಗೇ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆಯ ಸಿಇಒ ಜಾನಿ ಗ್ರೇವ್ ಅವರು ಐಸಿಸಿ ಮಹಿಳಾ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.