ಬೆಂಗಳೂರು : ನಗರದಲ್ಲಿ ಕೊರೊನಾ ಎರಡನೇ ಅಲೆ ತನ್ನ ಕಬಂದ ಬಾಹುಗಳನ್ನ ಕ್ಷಿಪ್ರಗತಿಯಲ್ಲಿ ಚಾಚುತ್ತಾ ಸಾಗಿದೆ. ಪ್ರತಿದಿನ ನಗರದಲ್ಲಿ ಕೊರೊನಾ ಸ್ಫೋಟವಾಗುತ್ತಿದ್ದು, ಇವತ್ತು 10,231 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲಿ ಬೆಂಗಳೂರು ದಕ್ಷಿಣ ವಲಯದಲ್ಲಿ ಕೊರೊನಾ ಸುನಾಮಿ ಎದ್ದಿದ್ದು, ಕಳೆದ ಕೆಲದಿನಗಳಿಂದ ಅಲ್ಲಿ ಕೊರೊನಾ ರುದ್ರನರ್ತನವಾಡುತ್ತಿದೆ.
ಇಂದು ಅತಿ ಹೆಚ್ಚು ಕೋವಿಡ್ ಪ್ರಕರಣ ಬೆಂಗಳೂರು ದಕ್ಷಿಣ ವಲಯದಲ್ಲಿ ವರದಿಯಾಗಿದೆ. ಒಟ್ಟು 2,117 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನುಳಿದಂತೆ ಆರ್ ಆರ್ ನಗರದಲ್ಲಿ 757, ಪಶ್ಚಿಮ ವಿಭಾಗದಲ್ಲಿ 1,479, ಬೊಮ್ಮನಹಳ್ಳಿಯಲ್ಲಿ 1,124, ದಾಸರಹಳ್ಳಿ 318, ಪೂರ್ವ ವಲಯ 1,692, ಮಹದೇವಪುರದಲ್ಲಿ 1,405, ಯಲಹಂಕ 570, ಅನೇಕಲ್ 302, ಪೂರ್ವ ತಾಲೂಕು 110, ಉತ್ತರ ತಾಲೂಕು 147, ದಕ್ಷಿಣ ತಾಲೂಕಿನಲ್ಲಿ 210 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.








