ನಟ ಮನ್ಸೂರ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
ದಕ್ಷಿಣ ಭಾರತದ ಖ್ಯಾತ ನಟ ಮನ್ಸೂರ್ ಅಲಿ ಖಾನ್ ಅವರ ಆರೋಗ್ಯದಲ್ಲಿ ಏರು ಪೇರುಂಟಾಗಿದ್ದು, ಅವರನ್ನ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಮನ್ಸೂರ್ ಅಲಿ ಖಾನ್ ಅವರ ಮೂತ್ರಪಿಂಡದಲ್ಲಿ ಕಲ್ಲು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಹಲವು ಪರೀಕ್ಷೆಗಳನ್ನು ಮಾಡಲಾಗಿದ್ದು, ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ತಿಳಿದು ಬಂದಿದೆ.
ಮನ್ಸೂರ್ ಅಲಿ ಕಾನ್ ತಮಿಳು , ತೆಲುಗು , ಕನ್ನಡ, ಮಳಯಾಳಂನ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ಬಹುತೇಕ ನೆಗೆಟಿವ್ ಶೇಡ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಕೆಲ ದಿನಗಳ ಹಿಂದೆ ಮನ್ಸೂರ್ ಅಲಿ ಕೇಂದ್ರ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ಹೊರಹಾಕುವ ಮೂಲಕ ಸುದ್ದಿಯಲ್ಲಿದ್ದರು. ಕೋವಿಡ್ ವ್ಯಾಕ್ಸಿನ್ ವಿಚಾರವಾಗಿ ಮಾತನಾಡಿ ಸರ್ಕಾರ ಬಲವಂತವಾಗಿ ಜನರಿಗೆ ವ್ಯಾಕ್ಸಿನ್ ನೀಡುತ್ತಿದೆ, ವ್ಯಾಕ್ಸಿನ್ ಪಡೆದ ನಂತರ ಜನರು ಸಾಯುತ್ತಿದ್ದಾರೆ, ಸರ್ಕಾರವೇ ಸಾರ್ವಜನಿಕರನ್ನು ಕೊಲ್ಲುತ್ತಿದೆ ಎಂದು ಆರೋಪಿಸಿದ್ದರು.
ಅಲ್ಲದೇ ಇತ್ತೀಚಿಗಷ್ಟೆ ಸಾವನ್ನಪ್ಪಿದ್ದ ತಮಿಳು ಹಾಸ್ಯ ನಟ ವಿವೇಕ್ ಅವರ ಸಾವಿನ ಬಗ್ಗೆಯೂ ಟೀಕೆ ಮಾಡಿದ್ದ ಮನ್ಸೂರ್ ಅಲಿ ಖಾನ್, ‘ವ್ಯಾಕ್ಸಿನ್ ಪಡೆದ ನಂತರವೇ ವಿವೇಕ್ ನಿಧನರಾದರು, ಅದಕ್ಕೂ ಮುಂಚೆ ವರು ಚೆನ್ನಾಗಿದ್ದರು’ ಎಂದು ಗಂಭೀರ ಆರೋಪ ಮಾಡಿದ್ದರು. ಮನ್ಸೂರ್ ಅಲಿ ಖಾನ್ ಅವರ ಈ ಆರೋಪಗಳ ವಿರುದ್ಧ ಮದ್ರಾಸ್ ಹೈ ಕೋರ್ಟ್ನಲ್ಲಿ ದೂರು ದಾಖಲಾಗಿತ್ತು. ಕೋವಿಡ್ ವ್ಯಾಕ್ಸಿನ್ ಬಗ್ಗೆ ತಪ್ಪು ಪ್ರಚಾರ ಮಾಡುತ್ತಿದ್ದಾರೆ ಎಂದು ನ್ಯಾಯಾಲಯ 2 ಲಕ್ಷ ದಂಡವನ್ನೂ ವಿಧಿಸಿತ್ತು.








