ಭಾರತದ ಸುಪ್ರಸಿದ್ಧ ಹಿನ್ನೆಲೆ ಗಾಯಕರೆನಿಸಿಕೊಂಡಿರುವ ಗಾನಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕೇವಲ ಸಂಗೀತ ಜಗತ್ತಿನಲ್ಲಷ್ಟೇ ಅಲ್ಲ, ನಟನೆ, ಸಂಗೀತ ಸಂಯೋಜನೆಯಲ್ಲೂ ತಮ್ಮ ಪ್ರವೀಣತೆಯ ಝಳಕ್ ತೋರಿಸಿ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ನೆಲೆಸಿದ ಸಂಗೀತ ಮಾಂತ್ರಿಕರು. ಅದರಲ್ಲೂ ದಕ್ಷಿಣ ಭಾರತದಲ್ಲಿ ಎಸ್ ಪಿಬಿ ಅವರ ಕೊಡುಗೆ ಅಪಾರ. ನಟನೆ, ಚಲನಚಿತ್ರ ಸಂಯೋಜನೆ, ಸಿನೆಮಾ ನಿರ್ಮಾಣ ಹೀಗೆ ಸಕಲ ಕಲಾ ವಲ್ಲಭರಾಗಿದ್ದ ಎಸ್ ಪಿಬಿ ಅವರ ಸಾಧನೆ ಹೇಳುತ್ತಾ ಹೋದರೆ ಪದಗಳು ಸಾಕಾಗುವುದಿಲ್ಲ.
ಹೌದು ಮೂಲತಃ ತೆಲುಗಿನವರಾದರೂ ಕನ್ನಡದ ಬಗ್ಗೆ ಅತಿ ಹೆಚ್ಚು ಒಲವಿಟ್ಟುಕೊಂಡಿದ್ದಾರೆ. ಧ್ವನಿ ದಾನ , ಸಂಗೀತ ಕಾರ್ಯಕ್ರಮಗಳ ನಿರ್ವಣೆಯಲ್ಲೂ ನಿರಂತರವಾಗಿ ಸಾಧನೆ ಮಾಡಿದವರು ಎಸ್ ಪಿ ಬಿ. ಇನ್ನೂ ಕನ್ನಡದಲ್ಲಿ ಒಂದೇ ದಿನ 17 ಗೀತೆಗಳನ್ನು ಧ್ವನಿಮುದ್ರಿಸಿದ್ದರು, ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ಧ್ವನಿಮುದ್ರಿಸಿದ್ದರು. ಇದು ಎಸ್ ಪಿ ಬಿ ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆ, ಅವರಿಗಿರುವ ವೈಶಾಲ್ಯತೆಗಳಿಗಿರುವ ನಿದರ್ಶನ. ಸಂಗೀತ ಪ್ರಧಾನವಾದ ಭಾರತೀಯ ಚಿತ್ರರಂಗದಲ್ಲಿ ಒಂದು ರೀತಿಯಲ್ಲಿ ಹಿನ್ನೆಲೆ ಗಾಯಕರು ಅಭಿನಯಿಸುವವರ ಆತ್ಮವಿದ್ದಂತೆ. ಇದೇ ವಿಚಾರವಾಗೇ ವರನಟ ದಿವಂಗತ. ಡಾ ರಾಜ್ ಕುಮಾರ್ ಅವರು ಒಮ್ಮೆ ಉಲ್ಲೇಖಿಸಿ ನೀಡಿದ್ದ ಹೇಳಿಕೆ ಲಕ್ಷಾಂತರ ಜನರ ಮನಸ್ಸು ಮುಟ್ಟಿತ್ತು. ಹೌದು ರಾಜಣ್ಣ ಅವರು ಒಂದೊಮ್ಮೆ ಎಸ್ ಪಿ ಬಿ ಅವರ ಬಗ್ಗೆ ಮಾತನಾಡುವಾಗ ‘ ಎಸ್ ಪಿ ಬಿ ನನ್ನ ಆತ್ಮ , ನಾನು ಶರೀರ ‘ ಎಂದು ಹೇಳಿದ್ದರು. ಬಳಿಕ ಹಲವೆಡೆ ಇದೇ ಮಾತನ್ನೇ ಮತ್ತೆ ಮತ್ತೆ ಹೇಳುತ್ತಿದ್ದರು.
ಕನ್ನಡದಲ್ಲಿ ಎಸ್ ಪಿಬಿ ಅವರು ಧ್ವನಿಯಾಗಿರುವ ಹಾವಿನ ದ್ವೇಶ 12 ವರ್ಷ, ಸ್ನೇಹದ ಕಡಲಲ್ಲಿ, ಎಲ್ಲಿರುವೇ ಮನವ ಕಾಡುವ ರೂಪಸಿಯೇ, ನಲಿವ ಗುಲಾಬಿ ಹೂವೇ ಹಾಡುಗಳು ಇಂದಿಗೂ ಜನರ ಬಾಯಲ್ಲಿ ರಾರಾಜಿಸುತ್ತವೆ. ಎಂದೆಂದಿಗೂ ಎವರ್ ಗ್ರೀನ್ ಪಟ್ಟಿಯಲ್ಲೇ ಇರಲಿವೆ. ಎಸ್ ಪಿ ಬಿ ಅವರ ಹಾಡಿನ ಮೋಡಿಗೆ ಮನಸೋಲದವರೇ ಇಲ್ಲ. ದೊಡ್ಡ ದೊಡ್ಡ ಸ್ಟಾರ್ ಗಳಿಂದ ಹಿಡಿದು ಎಲ್ಲರೂ ಎಸ್ ಪಿ ಬಿ ಅವರ ಸಾಧನೆಗೆ ಮೂಕವಿಸ್ಮಿತರಾಗುವುದರಲ್ಲಿ ಅನುಮಾನವೇ ಇಲ್ಲ.
ಸಂಗೀತ ಲೋಕದಲ್ಲಿ ಮಹತ್ಸಾಧನೆ ಮಾಡಿರುವ ಗಾನಗಂಧರ್ವ , ಸಂಗೀತ ಮಾಂತ್ರಿಕ ಎಸ್ ಪಿ ಬಿ ಅವರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಮಹಾನ್ ಕಲಾವಿಧರು. ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ಬಾಲು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ , ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.
ಅಪ್ರತಿಮ ಸಾಧನೆ ಮಾಡಿ ಸಂಗೀತ , ನಟನೆ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ ಎಸ್ ಪಿ ಬಿ. ವಿವಿಧ ಭಾಷೆಗಳ ಪರಿಧಿಯಲ್ಲಿ ಇಷ್ಟೊಂದು ಹಾಡಿರುವವರು ಇವರೊಬ್ಬರೇ. ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಕಂಠದಾನ ಕಲಾವಿದರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರದ್ದು.
ಸಂಗೀತ ಮಾಂತ್ರಿಕ ಎಸ್ ಪಿಬಿ ಅವರಿಗೆ ಆಗಸ್ಟ್ 5 ರಂದು ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಇದಾದ ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ ಪಿ ಬಿ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ತೀವ್ರ ನಿಘಾ ಘಟಕದಲ್ಲಿ ವೆಂಟಿಲೇಟರ್ ನಲ್ಲೇ ಇರಿಸಿ ಎಸ್ ಪಿಬಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಮತ್ತೊಂದೆಡೆ ಎಸ್ ಪಿ ಬಿ ಅವರು ಆರೋಗ್ಯವಾಗಿರಲಿ ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.








