ಬೆಂಗಳೂರು: ಪ್ರಶ್ನೋತ್ತರ ಕಲಾಪದ ವೇಳೆ ಹೇಳದೇ ಕೇಳದೇ ವಿಧಾನಸಭೆ ಕಲಾಪದಿಂದ ಹೊರಹೋಗಿದ್ದ ಸಚಿವ ಆರ್. ಶಂಕರ್ ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದ್ದಾರೆ.
ಸಚಿವ ಆರ್. ಶಂಕರ್ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಉತ್ತರ ನೀಡಲು ಮುಂದಾಗಿದ್ದಾರೆ. ಸ್ವಲ್ಪ ಸಮಯದ ಹಿಂದೆ ಇದ್ದ ಸಚಿವರು ಹೇಳದೆ ಕೇಳದೆ ಹೋಗಿದ್ದು ಸ್ಪೀಕರ್ ಕಾಗೇರಿ ಕೆಂಡಾಮಂಡಲರಾಗುವಂತೆ ಮಾಡಿತು.
ಇದಕ್ಕೂ ಮೊದಲು ಸಿಎಂ ಬಿ.ಎಸ್ ಯಡಿಯೂರಪ್ಪ ತಮ್ಮ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರನ್ನು ಪರಿಚಯ ಮಾಡಿಕೊಡುವಾಗ ಸದನದಲ್ಲೇ ಇದ್ದ ಆರ್. ಶಂಕರ್, ಪ್ರಶ್ನೆಗೆ ಉತ್ತರಿಸುವಾಗ ಯಾರಿಗೂ ಹೇಳದೆ ಹೊರಗೆ ಹೋಗಿದ್ದರು.
ಆಗ ಶಂಕರ್ ಬದಲಾಗಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಉತ್ತರ ನೀಡಲು ಎದ್ದು ನಿಂತರು. ಇದು ಸ್ಪೀಕರ್ ಹಾಗೂ ವಿಪಕ್ಷ ನಾಯಕರ ಕೋಪಕ್ಕೆ ಕಾರಣವಾಯಿತು. ಸಚಿವರನ್ನು ಪರಿಚಯ ಮಾಡುವಾಗ ಸಚಿವ ಆರ್. ಶಂಕರ್ ಸದನದಲ್ಲಿ ಇರುತ್ತಾರೆ. ಆದರೆ, ಪ್ರಶ್ನೆಗೆ ಉತ್ತರ ಕೊಡುವಾಗ ಮಾತ್ರ ಯಾರ ಗಮನಕ್ಕೂ ಬಾರದೆ ಹೊರಗೆ ಹೋಗುತ್ತಾರೆ. ಆರ್. ಶಂಕರ್ ನೀಡಬೇಕಾದ ಉತ್ತರವನ್ನು ಡಿಸಿಎಂ ಆದ ನೀವು ಕೊಡಲು ಮುಂದಾಗುತ್ತಿದ್ದೀರಿ. ಸದನಕ್ಕೆ ಮಾಹಿತಿ ಕೊಟ್ಟು ಹೊರಗೆ ಹೋಗುವ ಸೌಜನ್ಯವೂ ಶಂಕರ್ ಅವರಿಗೆ ಇಲ್ಲವೇ ? ಸದನದೊಳಗೆ ಒಂದು ಪದ್ಧತಿಯನ್ನು ಪಾಲಿಸಬೇಕಲ್ಲವೇ ? ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ಹೊರಹಾಕಿದರು.
ಸದನಕ್ಕೆ ಒಂದು ಪದ್ಧತಿ ಇರುತ್ತದೆ ಅನ್ನೋದನ್ನು ಅವರಿಗೆ ಹೇಳಿ ಎಂದು ಡಿಸಿಎಂ ಅಶ್ವಥ್ ನಾರಾಯಣ ಅವರಿಗೆ ಸ್ಪೀಕರ್ ಕಾಗೇರಿ ಹೇಳಿದರು. ಉತ್ತರ ಕೊಡಬೇಕಾದ ಸಚಿವರು ಕೌನ್ಸಿಲ್‍ಗೆ ಯಾಕೆ ಹೋದರು ಎಂದು ಪ್ರಶ್ನಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಇನ್ನುಮುಂದೆ ಈ ರೀತಿ ಆಗಬಾರದು ಸಲಹೆ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel