ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಕಾರಣಕ್ಕೆ ವಿಧಾನಸಭೆಯ ಸಮಿತಿಗಳಿಗೆ ಅಧ್ಯಯನ ಪ್ರವಾಸ, ಸ್ಥಳ ಭೇಟಿಗೆ ಅವಕಾಶ ನಿರಾಕರಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದರು. ಈ ಆದೇಶಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಹೆಚ್. ಕೆ. ಪಾಟೀಲ್, ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯಿಂದ ಆಸ್ಪತ್ರೆ, ಏರ್ ಪೋರ್ಟ್, ಬಸ್ ನಿಲ್ದಾಣಕ್ಕೆ ಭೇಟಿ ನೀಡಲು ತೀರ್ಮಾನ ಮಾಡಲಾಗಿದೆ. ಅಲ್ಲಿ ನಡೆದಿರುವ ಕೆಲ ಘಟನೆಗಳ ಬಗ್ಗೆ ತನಿಖೆ ಮಾಡಿ ನಿರ್ಣಯ ಮಾಡಲು ತೀರ್ಮಾನಿಸಿದ್ದೇವೆ. ನಮ್ಮ ಕರ್ತವ್ಯ ನಿರ್ವಹಿಸುವುದಕ್ಕೆ ಸಭಾಧ್ಯಕ್ಷರು ಅಡ್ಡಿ ಪಡಿಸಬಾರದು. ಸಮಿತಿ ಪರಿಶೀಲನೆಗೆ ಅಡ್ಡಿ ಮಾಡಿದರೇ ಜನದ್ರೋಹಿ ನೋಟಿಫಿಕೇಷನ್ ಆಗುತ್ತದೆ. ಲೆಕ್ಕಪತ್ರ ಸಮಿತಿ ಸದಸ್ಯರು ಭೇಟಿ ನೀಡಬಾರದು. ಯಾವುದೇ ಸ್ಥಳಗಳಿಗೆ ಹೋಗಬಾರದು ಎಂದು ಆದೇಶ ನೀಡಿದ್ದಾರೆ. ಇದರಿಂದಾಗಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡಲು ಸ್ಪೀಕರ್ ತೀರ್ಮಾನ ಮಾಡಿದಂತಾಗುತ್ತದೆ.
ಒಂದು ಕಾಲ ಇತ್ತು ಬರ ಬಂದರೆ ಸಾಕು ಅಂತ ಹೇಳುತ್ತಿದ್ದರು. ಈಗ ಕೊರೊನಾ ಬಂದ್ರೆ ಸಾಕು ಅನ್ನೋ ಕಾಲ ಬಂದಿದೆ. ಈ ಸಂಕಷ್ಟದಲ್ಲೂ ಭ್ರಷ್ಟಾಚಾರದ ವಾಸನೆ ಕಾಣಿಸುತ್ತಿದೆ. ಇಂತಹ ಸಮಯದಲ್ಲಿ ಲೆಕ್ಕಪತ್ರ ಸಮಿತಿ ಭೇಟಿ ಮಾಡುವುದು ಅಗತ್ಯವಾಗಿದೆ. ಅಲ್ಲದೇ ಸಂವಿಧಾನದ ಅಡಿಯಲ್ಲಿ ಸಮಿತಿ ರಚನೆ ಆಗಿರುತ್ತದೆ. ಈ ವಿಚಾರದಲ್ಲಿ ಸ್ಪೀಕರ್ ಮಧ್ಯ ಪ್ರವೇಶ ಸರಿಯಲ್ಲ. ಕೂಡಲೇ ಸ್ಪೀಕರ್ ಆದೇಶ ಹಿಂಪಡೆಯಬೇಕು ಎಂದು ಹೆಚ್. ಕೆ. ಪಾಟೀಲ್ ಒತ್ತಾಯಿಸಿದ್ದಾರೆ.








